ಇಲ್ಲಿ ಹರಿದ ಅಂಗಿಯ ಬಗ್ಗೆ ಆಡಿಕೊಳ್ಳುವುದಿಲ್ಲ….!

2 10 2010

          ಎಲ್ಲಿದ್ದಿಯಾ..? ಹೀಗೆ ನಿನ್ನ ನೋವಿಗೆ ನಲಿವಿಗೆ ನಾನಿದ್ದೇನೆ ಕಣೋ..ಎಂದು ಅವತ್ತು ಇಳಿ ಸಂಜೆಯಹೊತ್ತಲ್ಲಿ ನಿನ್ನ ಮುಂಗುರುಳ ಸರಿಸುತ್ತ ಕಣ್ಣ ಕೊನೆಯಲ್ಲೇ ಭಾಷೆ ನೀಡಿ,ಅದೆಲ್ಲಿ ಕಾಣೆಯಾದೆ..?ಗೊತ್ತಿಲ್ಲದ ಊರಿನ ಆ ರೈಲು ನಿಲ್ದಾಣದ ಮುಂಬಾಗಿಲ ಬಳಿ ನಿಂತು ನನ್ನ ಸ್ವಾಗತಿಸಿದ್ದೆಯಲ್ಲ..? ನಿನ್ನೆ ನಾನು ಆ ಜಾಗದಲ್ಲಿ ಅದೆಷ್ಟೋ ಹೊತ್ತು ಸುಮ್ಮನೇ ನಿಂತು ಬಂದೆ ಗೊತ್ತಾ..? ಅದೇನೋ ನಿನ್ನ ನೆನಪು ಎದೆಯ ಮಿದುವಿಗೆ ಮೃದುವಾಗಿ ಹಿತವಾದ ಯಾತನೆ ನೀಡುತ್ತಿದೆ.ನನ್ನ ಪಾಲಿಗೆ ಬದುಕೇ ಮುಗಿದಿತ್ತು.ನನ್ನ ಊರು,ಜನ,ಮನೆಯೆ ಮಂದಿ ಎಲ್ಲರೂ ನಿಕೃಷ್ಟವಾಗಿ ಕಾಣುತ್ತಿದ್ದ ಘಳಿಗೆಯಲ್ಲಿ; ನಾನು ಸಮಾಧಿ ಸೇರುವ ಸಂದಭ೯ದಲ್ಲಿದ್ದೆ,ಅದ್ಯಾವ ಮಾಯವೋ..! ನಿನ್ನ ದೂರವಾಣಿ ಕರೆ, ಆ ಘಳಿಗೆಯಲ್ಲಿ ನನ್ನ ಸಾವನ್ನ ಮರೆಸಿತ್ತು.”ಬಂದು ಬಿಡು ಮಿತ್ರಾ..ನಮ್ಮೂರಿಗೆ,ಬೆಂಗಳೂರೆಂಬುದು ನಿನ್ನಂಥ ನೊಂದವರಿಗೆ, ಹತಾಶರಿಗೆ, ಅವಮಾನಿತರಿಗೆ ನೆಮ್ಮದಿಯ ತಾಣ.ಇಲ್ಲಿ ನಿನ್ನಿಷ್ಟದ ಹಾಗೆ ಬದುಕಬಹುದು. ನಿನ್ನ ಪ್ರತಿ ಚಲನ ಗಮನಿಸಿ ಚಾಡಿ ಹೇಳುವರಿರುವುದಿಲ್ಲ.ನಿನ್ನ ಹರಿದ ಅಂಗಿಯ ಬಗ್ಗೆ ಆಡಿಕೊಳ್ಳುವುದಿಲ್ಲ. ನಿನ್ನ ಜೊತೆಗಿದ್ದ ಹುಡುಗಿ ಯಾರೆಂದು ಯಾರೂ ಪ್ರೆಶ್ನೆಸಿವುದಿಲ್ಲ.ಉಂಡೆಯಾ..ಮತ್ತೇನಾದರೂ ಕಂಡೆಯಾ..? ಹು..ಹುಂ..! ಯಾರೂ ಏನೂ ಕೇಳುವುದಿಲ್ಲ.ಇಲ್ಲಿ ಒಬ್ಬಿಬ್ಬರು ಬಲ್ಲವಿರಿದ್ದರೆ ಬೆಂಗಳೂರೆಂಬದು ಬೆಲ್ಲಂದಂಥದ್ದು ಮಹರಾಯ..ಬಂದು ಬಿಡು.” ಎಂದೆಯಲ್ಲಾ..! ನಿನ್ನ ಆ ನಿಷ್ಕಲ್ಮಷ ಮಾತೇ ನನ್ನ ನಿನ್ನೂರಿಗೆ ಬರುವಂತೆ ಮಾಡಿದ್ದು ಮತ್ತು ಹಿಡಿ ಅನ್ನ ನೀಡಿದ್ದು.ನಿನ್ನ ಹಾಗೂ ನಿನ್ನ ಬೆಂಗಳೂರನ್ನ ನಾ ಹೇಗೆ ಮರೆಯಲಿ ಗೆಳತಿ..? ಭಾವುಕರಿಲ್ಲದ ಯಾಂತ್ರಿಕ ನಗರ ಎಂದುಕೊಂದಿದ್ದೆ;ನನ್ನ ಹೂಯೆ ತಪ್ಪಾಯಿತು, ಇಲ್ಲಿ ಎಲ್ಲಾ ಇದೆ.ಅದು ನೋಡುವ ಕಣ್ಣಲ್ಲಿ ಮತ್ತು ಬದುಕುವ ಕ್ರಿಯೆಯಲ್ಲಿ ಅಡಗಿದೆ ಎಂಬುದಂತೂ ಸುಳ್ಳಲ್ಲ.ಅದೆಲ್ಲಾ ಸರಿ ಉಳಿಯಲು ನಿನಗೆ ಗೊತ್ತಿದ್ದ ಹುಡುಗನೊಬ್ಬನ ಸೂರಿಗೆ ಬಿಟ್ಟೆ.ಮಾಡಲು ಅದ್ಯಾರನ್ನೋ ಕೈ ಹಿಡಿದು ಕೆಲಸ ಗಿಟ್ಟಿಸಿ ಕೊಟ್ಟೆ.ಬಿಡುವಿದ್ದಾಗೆಲ್ಲಾ ಜೊತೆಗಿದ್ದು ನಿನ್ನೂರಿನ ನ್ಯೂನ್ನತೆ..ಪ್ರೆತಿಷ್ಠೆ..ಗತ್ತು,ದೌಲತ್ತು..ಪ್ರೀತಿ ಎಲ್ಲವನ್ನೂ ಪರಿಚಯಿಸಿದೆ.ಆದರೆ ಈಗ ಅದೆಲ್ಲಿ ಹೋದೆ ಗೆಳತಿ..? ಕಷ್ಟದಲ್ಲಿದ್ದಾಗ ಕಣ್ಣೀರ ಒರೆಸಿ,ಸಂತಸದ ಮಗ್ಗುಲಿಗೆ ಬದಲಿಸಿ, ಹೀಗೇ ಸುಖಾ ಸುಮ್ಮನೆ ಗೆದ್ದು ನಿಲ್ಲುವ ಹೊತ್ತಲ್ಲಿ ಎದ್ದು ಹೋದರೆ ಏನನ್ನಲಿ..? ನನಗೆ ನಿನ್ನ ಗುರಿ,ಬದುಕುವ ಪರಿ ಅಷ್ಟಾಗಿ ಗೊತ್ತಿಲ್ಲ ನಿಜ, ಆದರೆ ನಿನ್ನೊಳಗಿನ ಕಾಳಜಿ,ಜೀವನ್ ಪ್ರೀತಿ ಅದಿನ್ನೆಂಥಹದ್ದು ಎಂಬುದು ಖಂಡಿತಾ ಗೊತ್ತಿದೆ. ಅದ್ಯಾರನ್ನೋ..ಪ್ರೀತಿಸುತ್ತೇನೆ,ಪ್ರೀತಿಸುತ್ತೇನೆ ಅನ್ನುತ್ತಲೇ ಅವನ್ಯಾರೆಂದೂ ಹೇಳಲಿಲ್ಲ.ಬಿಡು,ಗೆಳೆಯನನ್ನೇ ಇಷ್ಟೊಂದು ಪ್ರೀತಿಸುವುವಳು;ಪ್ರಿಯಕರನಿಗಿಗೆ ಅದಿನ್ಯಂಥಹ ಪ್ರೀತಿ ಕೊಡುತ್ತೀಯೆಂದು ನಾನು ಊಹಿಸಬಲ್ಲೆ.ಪ್ರಾಯಶಃ ನೀನೀಗ ಅವನ ಹುಡುಕಾಟದಲ್ಲೋ..ಅಥವ ಅವನ ಸನಿಹದಲ್ಲೋ..ಈ ಗೆಳೆಯನಿಂದ ದೂರವಿರುವಿಯಾದರೆ, ನಿಜಕ್ಕೂ ನನಗೆ ಸಂತಸವೇ…! ನಾನೀಗ ನನ್ನ ಊರಿಗೆ ಹೊರಡಲಿದ್ದೇನೆ ಹೋಗುವ ಮುನ್ನ ನಿನ್ನ ಕಣ್ತುಂಬ ನೋಡಬೇಕೆನ್ನುವ ತುಡಿತ.ಸಾಧ್ಯವಾದರೆ ನಾಳೆ ಸಂಜೆ ಬರಮಾಡಿಕೊಂಡ ನಿಲ್ದಾಣಕ್ಕೆ; ನನ್ನ ಬೀಳ್ಕೊಡಲು ಖಂದಿತಾ ಬರುತ್ತಿ ತಾನೇ,,? ನಾಳೆಯ ಒಳಗೆ ನಾನು ಹೋಗುತ್ತಿರುವುದು ನಿನಗೆ ತಿಳಿಯದಿದ್ದರೆ; ನನ್ನೂರಿಗೆ ನಿನ್ನ ಲಗ್ನ ಪತ್ರಿಕೆ ಕಳಿಸುವುದ ಮರಿಬೇಡ.ಮದುವೆಯ ಮಂಟಪದಲ್ಲಿ ನಿನ್ನ ಅವನನ್ನ ಕಣ್ತುಂಬ ನೋಡಿ ಖುಷಿ ಪಡುತ್ತೇನೆ.
ಎಲ್ಲಿದ್ದರೂ ನಿನ್ನ ಬದುಕು ಬಂಗಾರವಾಗಲಿ ಗೆಳತಿ.
                                           -ವಂದನೆಗಳೊಂದಿಗೆ ನಿನ್ನ ಗೆಳೆಯ……………………………!





ಮದುವೆಗೆ ಮುಂಚೆ ಹಡೆದುಕೊಂಡ ಮಗುವನ್ನು ಯಾವ ಹೆಣ್ಣು ತಾನೇ ನನ್ನ ಮಗುವೆಂದು ಮುದ್ದಿಸಿಯಾಳು..?

30 05 2009

 4856211[1]

     ಹುಡುಗೀ, ಅವತ್ತು ಪೂರ್ವಾಹ್ನ ನಿಮ್ಮೂರಿನ ಊರ ಹೊರಗಿನ ದೇವರ ಜಗುಲಿಯ ಮೇಲೆ ಹಾಗೇ ಒಬ್ಬರಿಗೊಬ್ಬರು ಏನೊಂದೂ ಮಾತಾಡಿಕೊಳ್ಳದೇ; ಇಡೀ ಬದುಕೇ ಮುಗಿದು ಹೋದವರಂತೆ ಕುಳಿತಿದ್ದೆವಲ್ಲ? ಇವತ್ತು ಆ ಗುಡಿಯನ್ನೇ ಸೇವಾ ಸಮಿತಿಯವರು ನೆಲಸಮ ಮಾಡಿದ್ದಾರೆ. ಅದೇನೋ ಜೀರ್ಣೋದ್ಧಾರ ಹಣ ಸಂಗ್ರಹಿಸಿ ಇಡೀ ದೇಗುಲವನ್ನೇ ಹೊಸದಾಗಿ ನಿರ್ಮಿಸುವ ಯೋಜನೆಯಂತೆ ಅವರದ್ದು. ಎಂದೂ ಯಾರೊಂದಿಗೂ ಮಾತನಾಡದ ಆ ಕಲ್ಲು ದೇವರ ಮೇಲಿರುವ ನಂಬಿಕೆಯಲ್ಲಿ ಜೀವ ಇರುವ ನಮ್ಮಂತಹ ಎಳೆ ಹೃದಯಗಳ ಬಗ್ಗೆ ಕೊಂಚ ಹಿಡಿ ಮಮಕಾರ ಬೆಳಸಿಕೊಳ್ಳಲಾರದ ಸಮೂಹದ ಬಗ್ಗೆ ನನಗೆ ಅಯ್ಯೋ ಅನಿಸುತ್ತಿದೆ. ಮುರಿದ ಮನೆ- ಮಂದಿರಗಳನ್ನೆಲ್ಲಾ ಹೇಗೋ ಪುನಃ ಸರಿಪಡಿಸಿಕೊಳ್ಳಬಹುದು, ಆದರೆ ಸಂಪ್ರದಾಯ-ಆಚರಣೆ ಆಡಂಬರದಲ್ಲಿ ಎರಡು ಹೃದಯಗಳನ್ನು ಬೇರ್ಪಡಿಸಿ ಛಿದ್ರ ಛಿದ್ರಗೊಳಿಸಿತಲ್ಲ ಈ  ನಮ್ಮ ಜಾತಿ, ಸಮಾಜ;  ಇದನ್ನೆಲ್ಲಾ ಪುನಃ ಹೊಂದುಗೂಡಿಸಿ ಆ ಚೈತನ್ಯ, ಆ ದಿವ್ಯ ಸಂತಸವನ್ನ ಮತ್ತು   ಮರೆಯಲಾರದ ಆ ಕ್ಷಣಗಳನ್ನ ನಮ್ಮ ಬೊಗಸೆಗೆ  ತಂದಿಟ್ಟೀತೇ ಈ ನಮ್ಮ ಗೊಡ್ಡು ಸಂಪ್ರದಾಯದ ಸಮಾಜ….?  
             ದಿನಗಳು ಅದೆಷ್ಟು ಬೇಗ ಉರುಳಿಹೋಗುತ್ತವೆಲ್ಲವೇ?  ನಾನು ನೀನು ಕೈ -ಕೈ ಹಿಡಿದುಕೊಂಡು  ಅದೆಂದೂ ಹೋಗದ ರಸ್ತೆಯಲ್ಲಿ ಸುಮ್ಮನೇ ಈಡೇರದ ಭವಿಷ್ಯತ್ತಿನ ಕನಸು ಕಾಣುತ್ತಾ, ಕಂಡ ಕನಸಿನ ಬಗ್ಗೆ ದೂರವಾಣಿಯಲ್ಲೇ ಸಾಧ್ಯ ಅಸಾಧ್ಯಯಗಳ ಬಗ್ಗೆ ವಿಶ್ಲೇಷಿಸಿ ಕೊಳ್ಳುತ್ತಾ! ಪುಟಗಟ್ಟಲೆ ಪ್ರೇಮ ಕಾವ್ಯದ ಪತ್ರ ವಿನಿಮಯ ಮಾಡಿಕೊಂಡ ಆ ದಿನಗಳು ಮೊನ್ನೆ- ಮೊನ್ನೆ ತಾನೇ ಜರುಗಿವೇನೋ ಅನಿಸುತ್ತಲಿವೆ ಅಲ್ಲವೇ……?
ನಿನು ಹೋದಾಗಿನಿಂದ ಬದುಕು ನಿಜಕ್ಕೂ ನಿಂತಲ್ಲೇ ನಿಂತಿದೆ. ಆದರೆ ನಿನ್ನ ಬದುಕಿನಲ್ಲಾದ ತಿರುವುಗಳಿಂದ ನಾನಿನ್ನು ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಮನೆಯವರ ಒಕ್ಕೊರಲಿನ ಆರ್ತನಾದಕ್ಕೆ; ಒಲವ ತೊರೆದು  ಮತ್ತೊಬ್ಬನೊಂದಿಗೆ ತಾಳಿ ಕಟ್ಟಿಸಿಕೊಂಡ ನಿಸ್ಸಹಾಯಕ ಹೆಣ್ಣೇ….! ನಿನ್ನಂಥವಳು ಈ ಧರೆಗೆ ಮೊದಲೇನಲ್ಲ ಬಿಡು, ಅದೆಷ್ಟೋ ಹೆಣ್ಣುಗಳು ಒಲ್ಲದ ಗಂಡಸಿನೆದುರು ಕಣ್ಣೀರಿನಲ್ಲೇ ತಾಳಿ ಕಟ್ಟಿಸಿಕೊಳ್ಳುತ್ತಿದ್ದರೂ ಆಕೆಯ ಹಿಂದಿರುವ ಸಖಿಯರು “ತವರು ಮನೆಯನ್ನ ಮರೆಯ ಬೇಕೆಂದು ಈಗಲೇ ಕಣ್ಣೀರಿಟ್ಟ್ರೆ ಹೇಗೆ?” ಎಂದು ತಿಳಿಯಾದ ಲೇಪನ ಹಚ್ಚಿ ಆಕೆಗೆ ಇನ್ನಷ್ಟು ಅಳಲು ಸ್ವತಂತ್ರ ಕೊಡುತ್ತಾರೆ.
ಇಂತಹ ಸ್ಥಿತಿಯಲ್ಲೇ ನೀನು ಆತನ ಮನೆಯನ್ನು ಸೆರಿದೆಯೆಂದು ಕೇಳಲ್ಪಟ್ಟೆನಾದರೂ, ಅಂಗಳದಲ್ಲಿ ಆಟಕ್ಕೆ ಬಿಟ್ಟ ಮಗು ತಕ್ಷಣ ಕಣ್ಮರೆಯಾದಾಗ ಆಗುವ ತಾಯಿಯ ಆತಂಕ ನಿನ್ನದಾಗುತ್ತದೆಂದು ಭಾವಿಸಿದ್ದೆನಾದರೂ, ನಂತರ ತಿಳಿದಿತ್ತು; ಮದುವೆಗೆ ಮುಂಚೆ ಹಡೆದುಕೊಂಡ ಮಗುವನ್ನು ಯಾವ ಹೆಣ್ಣು ತಾನೇ ನನ್ನ ಮಗುವೆಂದು ಮುದ್ದಿಸಿಯಾಳು? ಆತ್ಮಗೌರವಕ್ಕಾಗಿ ತಿಪ್ಪೆಗೆ ಬಿಸಾಕಿದ ಮಗುವಿನ ಸ್ತಿತಿ ನನ್ನ್ನದಾಗಿತ್ತೆಂದು ನಂತರ ನನಗೆ ಗೊತ್ತಾಗಿತ್ತು. ಹಾಗೆ ಬಿದ್ದ ಮಗುವನ್ನು ಮತ್ತ್ಯಾರೊ ಹೊತ್ತೊಯ್ದು ಮುದ್ದಿನಿಂದ  ಸಾಕಿ ಸಲುಹಿದಂತೆ: ನಿನ್ನ ನೆನಪಲ್ಲೇ ಬದುಕಿದ್ದ ನನ್ನನ್ನು ಪುನಃ ವಾಸ್ತವ ಪ್ರಪಂಚಕ್ಕೆ ತಂದು- ಮೋಸದ ನಂತರವೂ ಬದುಕುವ ಮೋದವನ್ನ ಕಲಿಸಿಕೊಟ್ಟ ತಾಯಿ ಹೃದಯದ ಗೆಳತಿಯೊಬ್ಬಳ ಮಡಿಲೊಂದು ನನಗೆ ದೊರೆಯಿತು. ನಿಜಕ್ಕೂ “ಮುಂದಿನ ಜನ್ಮವೊಂದಿದ್ದರೆ ನಿನ್ನ ಮಗುವಾಗಿ ಹುಟ್ಟಿ ನಿನ್ನ ಋಣ ತೀರಿಸುತ್ತೇನೆ”  ಎಂದು ಆ ಗೆಳತಿಯ ತಂಪನೆಯ ಹಸ್ತದ ಮೇಲೆ ಪ್ರಮಾಣ ಮಾಡಿ ಎದ್ದು ಬಂದು ಮತ್ತೆ ನನ್ನ ಸಮೂಹದಲ್ಲೇ ಬೆರೆತುಕೊಂಡೆ.
       ಅಂದ ಹಾಗೆ ಮೊನ್ನೆ ಕಾರ್ತಿಕ ಮಾಸದ ಮೊದಲು ಅದೇ ಆಪ್ತ ಗೆಳತಿ ನನ್ನ ನೋಡಿಕೊಂಡು ಹೋಗಲು ಬಂದು; ನಿನ್ನ ಬಗ್ಗೆ, ನಿನ್ನ ಮಗುವಿನ ಬಗ್ಗೆ ಮಾತಡಿದಳು. ಅದೇನು ನೀನು ಮಗುವಿಗೆ ನನ್ನ ಹೆಸರನ್ನ ಇಟ್ಟಿರುವೆ ಎಂದು ಕೇಳಿ; ಹೆಣ್ಣಿನ ಅಂತರಾಳದ ನಿಜವಾದ ಅನ್ವೇಶಕ ಒಬ್ಬವನಾದರೂ ಇಲ್ಲಿ ಹುಟ್ಟಿ ಬಂದಿರಬಹುದೇ ಎಂದು ದಿಗ್ಮೂಢನಾಗಿ ಕುಳಿತುಬಿಟ್ಟೆ, ಅಲ್ಲದೇ ನಿನ್ನ ಗಂಡ ನಿಮ್ಮಿಬ್ಬರ ಸಂಸಾರದಿಂದ ಅರ್ಧಕ್ಕೆ ಎದ್ದು ಹೋದನೆಂದು ಕೇಳಲ್ಪಟ್ಟೆ ತುಂಬಾ ವ್ಯಥೆಯಾಯ್ತು ಹುಡುಗೀ, ನಿನ್ನ ಬದುಕು ನನ್ನ ಪಾಲಿಗೆ. ಮೊದಲೇ ನಾನು ಭಾವುಕ; ನಿನ್ನ ವಿಳಾಸವನ್ನ ಗೆಳತಿ ಕೊಡಲಿಲ್ಲ, ದೂರವಾಣಿ ಸಂಖ್ಯೆಯಂತೂ ಸಿಗಲೇ ಇಲ್ಲ. ಸಧ್ಯ ಈ ಪತ್ರವಾದರೂ ನಿನಗೆ ಸಿಗಬಹುದಾ…? ಗೊತ್ತಿಲ್ಲ.
ನನ್ನ ಮನಸಿನ ಸಮಾಧಾನಕ್ಕಾದರೂ ಈ ಪತ್ರ, ಹೇಗಾದರೂ ನಿನಗೆ ಸಿಗಲಿ ಎಂಬ ನಂಬಿಕೆಯೊಂದಿಗೆ,

              ಅದೇ ನಾನು….!





ನಾನು ಮತ್ತು ಅವಳು…!

28 03 2009

images3

ಐದು ವರ್ಷಗಳ ಹಿಂದೆ ಇದೇ ಬಸ್ ನಿಲ್ದಾಣದಲ್ಲಿ ಅವಳಿಗಿಗಾಗಿ, ಕೇವಲ ಅವಳ ಬರುವಿಕೆಗಾಗಿ ನಿರೀಕ್ಷಿಸುತ್ತಿದ್ದನಾನು; ಅವಳು ಬರುವವರೆಗೂ ಅಲ್ಲಿಯೇ ಕುಳಿತು ಭಿಕ್ಷೆ ಬೇಡುತಿದ್ದ ಮುದುಕಿಯ ಮುಖದ ಮೇಲಿನ ಸುಕ್ಕುಗಟ್ಟಿದ ರೇಖೆಯನ್ನೇ ನೋಡುತ್ತಾ ಕುಳಿತಿದ್ದೆ.ಅಡ್ಡಬಂದ ಬಟಾಣಿ ಮಾರುವ ಹುಡುಗ ಹಿಂದೆ ಹರಿದಿದ್ದ ಚಡ್ಡಿಯನ್ನು ಮೇಲೆಕ್ಕೇರಿಸಿಕೊಳ್ಳುತ್ತಾ “ಟೈಮೆಷ್ಟಾಗಿದೆಸಾರ್” ಎಂದಾಗಲೂ ಮೂಕವಿಸ್ಮಿತನಾಗಿ ನಿಂತಿದ್ದೆ. ಹಾಗೆ ನಿಂತಿದ್ದಾಗಲೇ ಇವನೆಲ್ಲೋ ಮಾತು ಬಾರದ ಮೂಕನಿರಬೇಕು ಎಂಬಂತೆ ನೋಡಿ ಹೊರಟು ಹೊದ.
ಆಗ ನಿಜಕ್ಕೂ ಮಾತೆಲ್ಲ ಸತ್ತಂತಾಗಿ ಮೌನವೊಂದೇ ತನ್ನ ಸಾಂಮ್ರಾಜ್ಯವಾಳುತ್ತಿತ್ತು. ಹಣೆಯ ಮೇಲೆಲ್ಲಾ ಪದೇ ಪದೇ ಬೆವರ ಹನಿ ಸಾಲಿಕ್ಕುತ್ತಿದ್ದವು.ಕುಳಿತಲ್ಲಿ ಕೂಡಲಾಗುತ್ತಿರಲಿಲ್ಲ. ಕೈಯಲ್ಲಿಡಿದಿದ್ದ ದಿನ ಪತ್ರಿಕೆಯೇ ಭಾರವಾಗಿತ್ತು.ದೇಹವೆಂಬುದು ಮನಸನ್ನ ಹೊತ್ತುತಿರುಗುತ್ತದೆ.ಮನಸ್ಸು ಭಾರವಾದಾಗ ದೇಹ ನಿಸ್ತೇಜ ಹೊಂದುತ್ತದಂತೆ.
    ಈಗ ನನ್ನ ದೇಹವೇಕೆ ನಿಸ್ತೇಜ ಹೊಂದಿದೆ? ಎಂದು ನನ್ನ ಮನಸ್ಸನ್ನ ಕೇಳಿಕೊಂಡಾಗ ಅರಿವಿಗೆ ಬಂದಿತ್ತು ಇಂದು ನಮ್ಮಿಬ್ಬರ ಅಗಲುವಿಕೆಯ ದಿನ. ಆರು ವರ್ಷಗಳಿಂದ ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿದ್ದೆಲ್ಲಾ ಸುಳ್ಳೆಂದು ಹೇಳುವ ದಿನ ಹಾಗೂ ಎಷ್ಟೇ ದುಃಖವಿದ್ದರೂ ನಗೆಯ ಮುಖವಾಡ ಧರಿಸಿ ವಿದಾಯ ಹೇಳುವ ದಿನವಾದ್ದರಿಂದ ನನ್ನ್ನ ಮನಸ್ಸು ದಿಕ್ಕು ತಪ್ಪಿದ ನಾವೆಯಂತೆ, ಕೊಡೆ ಕಂಡು ಬೆದರುವ ಹೋರಿಯಂತೆ,ನೀರಿನಿಂದ ಹೊರಬಿದ್ದ ಮೀನಿನಂತೆ, ಹೆಣ್ಣು ದೇವರ ಗುಡಿಯ ಮುಂದೆ ದೆವ್ವಬಂದವನು ಸುತ್ತವ ಹಾಗೆ ಬಸ್ ನಿಲ್ದಾಣದ ತುಂಬೆಲ್ಲಾ ಸುತ್ತಾಡಿದ್ದೇ ಸುತ್ತಾಡಿದ್ದು. ಸುತ್ತಾಡಿ ಸುಸ್ತಾಗಿ ತುಸುಹೊತ್ತು ಮತ್ತೆ ಕುಳಿತುಕೊಳ್ಳಲು ಸ್ಥಳ ನೋಡುತ್ತಿಂತೆ ಬಂದಿದ್ದಳು ಅವಳು.
         ಬಂದ ತಕ್ಷಣ “ಹೇಗಿದ್ದೀಯ” ಅನ್ನಲಿಲ್ಲ. ಬಂದು ಬಹಳ ಹೊತ್ತಾಯ್ತಾ…? ಅನ್ನಲಿಲ್ಲ. ಕಣ್ಣಲ್ಲೇ ಸನ್ನೆಮಾಡಿ ಹೋಟಲೊಂದಕ್ಕೆ ಕರೆದೊಯ್ದು ಸಕ್ಕರೆ ಇಲ್ಲದ ಚಹಾಕ್ಕೆ ಆರ್ಡ್ರರ್ ಮಾಡಿದ್ದಳು. ಯಾಕೆಂದು ನಾನೂ ಕೇಳಲಿಲ್ಲ. ಇಂದಿನಿಂದ ಸಕ್ಕರೆರಹಿತ ಚಹಾ ಕುಡಿಯೋಣ ಎಂಬಂತಿತ್ತು ಅವಳ ಆ ಮೌನ. ಆವರಿಸಿಕೊಂಡಿದ್ದ ಮೌನವನ್ನ ಮುರಿಯುವ ತಾಕತ್ತು ನನ್ನಲ್ಲಿರಲಿಲ್ಲ.
ದುಃಖಕ್ಕಿಂತ ಮೌನ ಏನು ಮಹಾ..? ಮೌನದಾ ಕೋಟೆಯನ್ನು ಸೀಳಿ ಕಣ್ಣೀರಿನ ಮೂಲಕ ಹೊರಗೆ ಬಂದಿತ್ತು ಅವಳ ದುಃಖ. ಅವಳ ದುಃಖಭರಿತ ಕಣ್ಣೀರಿನ ಕಣ್ಣನ್ನು ನೋಡಿದಾಕ್ಷಣ ನನಗೇ ಗೊತ್ತಿಲ್ಲದೆ ನನ್ನೊಳಿಗಿನ ನಾನು ಬಿಕ್ಕಳಿಸತೊಡಗಿದೆ. ಜೇಬಿನಲ್ಲಿದ್ದ ಕರವಸ್ತ್ರ ಕಣ್ಣಲ್ಲಿ ನೀರು ಬರುತ್ತಲಿದೆ ಎಂದು ಎಚ್ಚರಿಸಿ
ದಾಗಲೇ ವಾಸ್ತವಕ್ಕೆ ಬಂದು ಮುಂದಿದ್ದ ಚಹಾದ ಕಪ್ಪನ್ನು ಅವಳ ಕೈಗೆ ತಗುಲಿಸಿದೆ, “ಹಾಂ” ಅಂದಳು.
ಕೆನ್ನೆಯ ಮೇಲಿನ ಕಣ್ಣೀರನ್ನು ತುದಿಬೆರಳಲ್ಲೇ ಸವರಿಕೊಳ್ಳುತ್ತಾ ತನ್ನ ಜಂಭದ ಚೀಲದಿಂದ ನಾ ಅವಳಿಗೆ ಬರೆದಿದ್ದ ಪ್ರೇಮ ಪತ್ರಗಳನ್ನೆಲ್ಲಾನನ್ನ ಮುಂದೆ ಹೊರತೆಗೆದು ಗುಡ್ಡೆ ಹಾಕಿದ್ದಳು. ಎಂದೋ ನಾ ಬರೆದು ಮರೆತಿದ್ದ ಕವಿತೆಗಳನ್ನು ನನ್ನ ಕೈಗಿಟ್ಟಳು. ಕಾರ್ತಿಕ ಮಾಸದಲ್ಲಿ ಮಾಡಿಸಿಕೊಟ್ಟ ಸರವನ್ನು ಬಿಚ್ಚಿ ಪಕ್ಕಕ್ಕಿಟ್ಟಳು. ಕೊನೆಯದೆಂಬತೆ  ನನ್ನ ಕೈಗೊಂದು ಲಕೋಟೆಯನ್ನಿಟ್ಟು ಚಹಾದ ಬಿಲ್ ಹಿಡಿದು ಹೊರಟುಹೋದಳು. ಅವಳು ನನ್ನ ಕಣ್ಣಿಂದ ಮರೆಯಾಗುವವರೆಗೂ ನೋಡಿದೆ.ಒಮ್ಮೆಯೂ ತಿರುಗಿ ನೋಡದೇ ಅದ್ಯಾವುದೋ ಬಸ್ಸನ್ನೇರಿ ಹೋದಳು. ಅವಳು ಹಿಂದಿರುಗಿಸಿದ್ದ ಪ್ರತಿಯೊಂದು ಪತ್ರವನ್ನೂ ನನ್ನ ಹೆಗಲ ಚೀಲದಲ್ಲಿ ತುಂಬಿಕೊಂಡಿದ್ದೆ. ನಂತರ ಕೊನೆಯದಾಗಿ ಕೊಟ್ಟುಹೋದ ಪತ್ರದ ಮಡಿಕೆಗಳನ್ನು ಬಿಡಿಸಿ ನೋಡಿದಾಗ; ನಿಜಕ್ಕೂ ನಾ ತಬ್ಬಿಬ್ಬಾಗಿದ್ದೆ.
ನನ್ನೊಲಿವಿನ ಹುಡುಗನೇ……!
ನಾ ನಿನಗೇ ಬರೆಯುವ ಪತ್ರ ಕೊನೆಯದೇನೋ? ನಾನು ನೀನೂ ಒಮ್ಮೆಯೂ ಮಾತಾನಾಡದೆ ಆರು ವರ್ಷಗಳು ನಿರಂತವಾಗಿ ಪ್ರೀತಿಸಿದ್ದೆವು ಎಂದರೆ ಪ್ರಾಯಶಃ ಈ ಸಮಾಜ ನಂಬುವುದಿಲ್ಲ. ಯಾರ ನಂಬುಗೆಯೂ ನಮಗೆ ಅವಶ್ಯಕವಾಗಿರಲಿಲ್ಲ.ಪತ್ರದಲ್ಲಿಯೇ ಭಾವನೆಯನ್ನು ಹಂಚಿಕೊಂಡು,ಕಣ್ಣಲ್ಲೇ ಸೌಂದರ್ಯ ಸವಿಯುತ್ತ, ತುಟಿಯಂಚಿನ ಮೂಲಕ ಮುಗುಳ್ನಗೆಯ ಸಂಭಾಷಣೆ ನಡೆಸಿದ್ದೆವೆಂದರೆ;
ಮೇಲಿನ ದೇವರೆಂಬ ದೇವರೂ ನಂಬುತ್ತಾನೋ ಇಲ್ಲವೋ? ಅದರೆ ನಮ್ಮಿಬ್ಬರ ಹೃದಯಗಳು ಒಂದನ್ನೊಂದು ಅರ್ಥೈಸಿಕೊಂಡು ಪ್ರೀತಿಸುತ್ತಿದ್ದವು ಎಂದರಿತದ್ದು ಮಾತ್ರ ಸತ್ಯ ಅಲ್ವಾ..? ನೀನು ನನ್ನ ಪ್ರೀತಿಸುವುದಕ್ಕಿಂತ ಮುಂಚೆ ಅಂದರೆ ಸ್ನೇಹ ಪೂರ್ವಕವಾಗಿ ಬರೆಯುತಿದ್ದ ಪತ್ರಗಳಲ್ಲಿ ನನ್ನ ಬಗ್ಗೆ ನನ್ನ ಮನೆಯ ಸದಸ್ಯರ ಬಗ್ಗೆ, ಮುಂದಿನ ಗುರಿ ಉದ್ದೇಶಗಳ ಬಗ್ಗೆ ಸವಿಸ್ತಾರವಗಿ ತಿಳಿದುಕೊಳ್ಳಲು ಹವಣಿಸುತ್ತಿದ್ದೆಯಾದರೂ, ನಾನು ಏನೆಂದರೆ ಏನೂ ಹೇಳಿಕೊಳ್ಳದೆ ನಾ ನಿನ್ನ ಪ್ರೀತಿಸುತ್ತಿದ್ದೀನಿ ಎಂದಷ್ಟೇ ಹೇಳಿದ ಮೇಲೆ ನಿನ್ನ ಪತ್ರದ ಶೈಲಿಯೇ ಬದಲಿಯಾಯಿತು. ಬರೀ ಪ್ರೀತಿಯ ಬಗ್ಗೆ, ಮುಂದಿನ ಜೀವನದ ಬಗ್ಗೆ ಕನಸುಗಳನ್ನ ಹೆಣೆಯುತ್ತಾ ಭ್ರಮಾಲೋಕದಲ್ಲಿಯೇ ವಿಹರಿಸಿಬಿಟ್ಟೆವು.
ನಿನಗಿನ್ನೊಂದು ವಿಷಯ ಗೊತ್ತಿರಲಿಕ್ಕಿಲ್ಲ ಮತ್ತು ಈಗಲೂ ನಿನ್ನಗೆ ಗೊತ್ತಿಲ್ಲ. ಅಲ್ಲಿ ನಾನಿದ್ದ ಮನೆ ನನ್ನ ತಂದೆ ತಾಯಿಯರದಲ್ಲ. ಅದು ನನ್ನ ತಾಯಿಯ ತಂಗಿಯ ಮನೆ. ಅಂದರೆ ಚಿಕ್ಕಮ್ಮಳ ಮನೆ. ನಾನು ಚಿಕ್ಕವಳಿದ್ದಾಗಲೇ ತಂದೆ- ತಾಯಿಯರನ್ನು ಕಳೆದುಕೊಂಡ ನತದೃಷ್ಟೆ. ಯಾವುದೋ ವಾಹನ ಅಪಘಾತದಲ್ಲಿ ಇಬ್ಬರೂ ಸಾವ್ನ್ನಪ್ಪಿದ್ದರಂತೆ. ಯಾರೂ ಇಲ್ಲದೇ ಅನಾಥೆಯಾಗಿದ್ದ ನನಗೆ ಚಿಕ್ಕಮ್ಮಳೇ ಆಶ್ರಯಕೊಟ್ಟಿದ್ದಳು. ಅವರ ಸ್ವಂತ ಮಗಳಿಗಿಂತ ಚನ್ನಾಗಿನೋಡಿಕೊಂಡು ವಿದ್ಯಾಭ್ಯಾಸ ಕೊಡಿಸಿದರು. ಬದುಕು ಸರಳರೇಖೆಯಂತೆಯೇ ನಡೆದಿತ್ತು. ಅದ್ಯಾವ ಘಳಿಗೆಯಲ್ಲಿ ನೀ ಬಂದು ನಮ್ಮ ಮನೆಯ ಪಕ್ಕದಲ್ಲಿಯೇ ಮನೆ ಮಾಡಿದೆಯೋ? ಅಂದಿನಿಂದ ನನ್ನ ಮನಸ್ಸು ಹಿಡಿತದಲ್ಲಿರಲಿಲ್ಲ. ನಿನ್ನ ಕಣ್ಣಿನ ಮೊನಚಾದ ನೋಟಕ್ಕೆ ಸೋತು ಬಿಟ್ಟೆ.ಸೋತ ದಿನದಿಂದಲೇ ಗೋಡೆಯ ಮಧ್ಯದ ಕಿಟಕಿಯಿಂದ ಪತ್ರ ವಿನಿಮಯವಾದದ್ದು ಮತ್ತು ಇಲ್ಲದ್ದನ್ನ ಕಲ್ಪಿಸಿಕೊಂಡದ್ದು.
ನಿನ್ನದೊಂದು ಪತ್ರ ಚಿಕ್ಕಮ್ಮಳ ಕೈಗೆ ಅದು ಹೇಗೆ ಸಿಕ್ಕಿತೋ..? ನಾ ಕಾಣೆ. ಅವತ್ತಿನ ಸ್ಥಿತಿ ಹೇಳತೀರದು.”ತಾಯಿ ಇಲ್ಲದ ಮಗಳು ಅಂತ ಸಲುಗೆಯಿಂದ ಬಿಟ್ಟಿದ್ದಕ್ಕೆ ಈ ರೀತಿ ಮಾಡ್ತಾಇದ್ದೀಯ? ಯಾವನೋ ಗೊತ್ತು ಗುರಿ ಇಲ್ಲದ ಆ ಕರಿಯನನ್ನು ಛಿ,, ನಿನ್ನ ಚಿಕ್ಕಪ್ಪನಿಗೆ ಹೇಳಿದ್ರೆ ನಿನ್ನ ಮೂಳೆ ಮುರಿದು … ನನ್ನನ್ನೂ ಕೊಚ್ಚಿ ಹಾಕ್ತಾರೆ.
ನನ್ನ ಅಕ್ಕ ಅಂಥವಳಲ್ಲ, ಅಂದ್ರೆ ನಿನ್ನಮ್ಮ. ದಯಮಾಡಿ ನನ್ನ ಅಕ್ಕಳ ಹೆಸರಿಗೆ ಚ್ಯುತಿ ತರಬೇಡ. ಇದೇ ಮಾಸದಲ್ಲಿ ನಿನಗೆ ಗಂಡು ಹುಡುಕಿ ಮದುವೆ ಮಾಡ್ತೀವಿ. ನಮಗೆ ಸ್ವಲ್ಪನಾದ್ರೂ ಬೆಲೆ ಕೊಡೋದಾದ್ರೆ,ನೀನಿಂದೇ ಬಳ್ಳಾರಿಯ ನಮ್ಮ ಸಂಬಂಧಿಕರ ಮನೆಗೆ ಹೋಗಿರು.
ನೀನು ಇವತ್ತೇ ಬರ್‍ತಾ ಇದ್ದೀ ಅಂತ ಅವರಿಗೆ ಪೋನ್ ಮಾಡಿ ಹೇಳ್ತೀನಿ”.  ಅಳುವುದಕ್ಕೂ ಆಸ್ಪದ ಕೊಡದೇ ಪೋನ್ ಮಾಡಿಟ್ಟ ತಕ್ಷಣ ನನ್ನ ಬಟ್ಟೆಗಳನ್ನೆಲ್ಲಾ ಚಿಕ್ಕಮ್ಮಳೇ ಒಂದು ಚೀಲಕ್ಕೆ ತುಂಬಿ, ನೂರರ ಮೂರು ನೋಟು ಕೊಟ್ಟು,, ಬಸ್ ನಿಲ್ದಾಣಕ್ಕೆ ಅವಳೇ ಬಂದು ಬಸ್ಸನ್ಹತ್ತಿಸಿಬಿಟ್ಟಳು.
ಅಂಥ ಸಮಯದಲ್ಲಿ ನಿನಗೊಂದು ಪತ್ರ ಗೀಚಿ ಕಿಟಕಿಯೊಳಗೆ ಹಾಕಲು ಅವಕಾಶ ಸಿಗಲಿಲ್ಲ. ಇಲ್ಲಿಗೆ ಬಂದನಂತರ; ನಿನಗೆ ಬಳ್ಳಾರಿಗೆ ಬಂದು ಹೋಗಲು ಚಿಕ್ಕ ಪತ್ರ ಬರೆದೆ ಮತ್ತು ನೀನು ಬಂದೇ ಬರುತ್ತೀ ಎಂಬ ಭರವಸೆಯಲ್ಲಿಯೇ ನಿನ್ನೊಂದಿಗೆ ಮಾತಿಗಿಳಿಯಲು ಭಯವಾಗುತ್ತದೆಂದೇ ನೀನೀಗ ಓದುತ್ತಿರುವ ಪತ್ರ ಬರೆದಿಟ್ಟುಕೊಂಡಿದ್ದೆ ಹಾಗೂ ನಿನಗೆ ಬರಲು ತಿಳಿಸಿದ ಪತ್ರದಲ್ಲಿ;  ಇಂದು ನಾವಿಬ್ಬರೂ ಕೊನೆಯದಾಗಿ ಅಗಲುವ ದಿನ, ಎಂದು ಬರೆದಿದ್ದೆ.ಪ್ರಾಯಶಃ ಮನಸ್ಸಿಗೆ ತುಂಬಾ ವೇದನೆಯಾಗಿರಬೇಕು…ಅದಕ್ಕಾಗಿ ನಿನ್ನಲ್ಲಿ ಕ್ಷಮೆಯಾಚಿಸುವೆ.ನಮ್ಮಿಬ್ಬರ ಮಧ್ಯೆ ಪರಿಸ್ಥಿತಿ ಈ ರೀತಿಯಲ್ಲಿ ಹಿಂಸಿಸುತ್ತದೆಂದು ನಾನು ನಿಜಕ್ಕೂ ಊಹಿಸಿರಲಿಲ್ಲ. ನಿನ್ನ ಜೀವನವಾದರೂ ಸುಖಕರವಾಗಿರಲಿ.
                  ಇಂತಿ
                      ನಿನ್ನಿಂದ ದೂರಾದಗೆಳತಿ….

ಹೀಗೆ ಬರೆದು ದೂರಾದ ಗೆಳತಿಯನ್ನು ಶಪಿಸದೆ, ಅವಳ ನೆನಪಿನಲ್ಲಿಯೇ ದಿನಗಳನ್ನು ಕಳೆದೆ. ಅವಳಿಗೆ ಮದುವೆಯಾಯಿತೆಂದು ಕೆಲವು ದಿನಗಳ ಬಳಿಕ ಅವಳ ಚಿಕ್ಕಮ್ಮನ ಮಗಳೇ ರಸ್ತೆಯ ಬದಿಯಲ್ಲೊಮ್ಮೆ ಹೇಳಿದ್ದಳು. ಇದಾಗಿ ಐದು ವರ್ಷಗಳ ನಂತರ ಅದೇ ಹುಡುಗಿಯ ಹಸ್ತಾಕ್ಷರದ ಪತ್ರವೊಂದು ಪುನಃ ಬಂದಿತ್ತು.
“ಪ್ರೀತಿಯ ಹುಡುಗಾ…..!

ಹೇಗಿದ್ದೀಯಾ? ನಾನು ಕಣೋ! ಅದೇ ಮಾತನಾಡದ ಮೌನಗೌರಿ. ನಿನ್ನನ್ನು ತುಂಬ ನೋಡಬೇಕೆನಿಸಿದೆ.ಈ ನಿಮಿತ್ತ ನೀನು ಇದೇ ಭಾನುವಾರ ಪ್ರೀತಿಗೆ ವಿದಾಯ ಹೇಳಿದ ಹೋಟಲ್ಲಿನಲ್ಲಿ; ಮಧ್ಯಾಹ್ನ ಒಂದು ಗಂಟೆಗೆ ನನ್ನನ್ನು ಭೇಟಿಯಾಗಲೇಬೇಕು. ಇದು ನನ್ನ ಕೊನೆಯ ಆಸೆ. ನೀನು ಬಂದೇ ಬರುತ್ತೀ ಎಂದು ಬಲವಾಗಿ ನಂಬಿದ್ದೇನೆ”.
                     ಇಂತಿ..ನಿನ್ನ….
  ಪತ್ರ ಕೈಯಲ್ಲಿ ಹಿಡಿದುಕೊಂಡೇ ಯೋಚಿಸಿದೆ. ಹೋಗಲೋ? ಬೇಡವೋ..? “ಇದು ಕೊನೆಯ ಭೇಟಿ” ಎಂದಿದ್ದಾಳೆ. ಹೋದರಾಯ್ತೆಂದು ನಿರ್ಧರಿಸಿಯೇ ಮೇಲೆದ್ದೆ.
ಪತ್ರ ಶನಿವಾರವೇ ಬಂದಿತ್ತಾದ್ದರಿಂದ; ಮಾರನೆಯ ದಿನ ಮುಂಜಾನೆ ಏಳು ಗಂಟೆಗೇ ರಡಿಯಾಗಿ ಬಳ್ಳಾರಿಯ ಬಸ್ಸು ಹತ್ತಿ ಕುಳಿತೆ. ಮೂರುವರೆ ತಾಸಿನ ಹಾದಿ.ಬಳ್ಳಾರಿ ಬಂದದ್ದೇ ಗೊತ್ತಾಗಲಿಲ್ಲ. ಏಕೆಂದರೆ ನನ್ನ ಮನಸ್ಸೆಲ್ಲಾ ಅವಳ ಕುರಿತೇ ಯೋಚಿಸುತ್ತಿತ್ತಾದ್ದರಿಂದ ಕಲ್ಪನಾಲೋಕದಲ್ಲಿ ಸಾಗಿದ ಹಾದಿ ಅರವಿಗೆ ಬರಲಿಲ್ಲ. ಬಸ್ಸಿಳಿದ ನಂತರ ಅದೇ ಐದು ವರ್ಷದ ಕೆಳಗೆ ಭಿಕ್ಷೆ ಬೇಡುತ್ತ ಕುಳಿತಿದ್ದ ಮುದುಕಿಯನ್ನೇ ವೀಕ್ಷಿಸಿದೆ. ಹಾಗೆಯೇ ಇದ್ದಾಳೆ. ಆದರೆ ಮುಖದ ಮೇಲಿನ ಸುಕ್ಕುರೇಖೆಗಳು ತೀರಾ ಕಪ್ಪಾಗಿವೆ. ಬಟಾಣಿ ಮಾರುತ್ತಿದ್ದ ಹುಡುಗ ಕಾಣಿಸುತ್ತಿಲ್ಲ. ಬಹುಶಃ ಈಗ ಪೇಪರ್ ಮಾರುತ್ತಿರಬಹುದೇನೋ..? ಎಂದು ಕೊಂಡು ಸುಮ್ಮನಾದೆ.
ಆವತ್ತಿದ್ದ ಆತಂಕ ಇವತ್ತಿರಲಿಲ್ಲ. ಏಕೆಂದರೆ ಮನಸ್ಸೆಂದೋ ಮುರಿದು ಕಲ್ಲಂತಾಗಿದ್ದರಿಂದ; ಭಾವನೆಗಳೆಲ್ಲಾ ನಾಶವಾಗಿ ನಿರ್ಭಾವುಕನಾಗಿದ್ದೆ. ಅದೇಕೋ ಕಾಣೆ ಅವಳ ಅದ್ಯಾವ ಮಾಯೆಯಲ್ಲಿ ಪುನಃ ಬಳ್ಳಾರಿಗೆ ಬರುವಂತೆ ಮಾದಿತೋ? ಗೊತ್ತಿಲ್ಲ. ಮನದಲ್ಲಿ ನೂರಾರು ಆಲೋಚನೆಗಳು ಬಂದು ಹೋದರೂ ಅವಳೇಕೆ? ಇಲ್ಲಿಗೆ ಬರಲು ಹೇಳಿದ್ದಾಳೆಂದು ಉತ್ತರ ಸಿಗಲಿಲ್ಲ. ಇನ್ನೇನು ಗಂಟೆ ಒಂದಾಯ್ತು, ಅವಳೇ ಬರ್‍ತಾಳಲ್ಲ! ಎಂದು ನಿರ್ಧರಿಸಿ ಅದೇ ಹೋಟಲ್ ಕಡೆ ಹೆಜ್ಜೆ ಹಾಕಿದೆ.
ನಾ ಅಂದು ಕೊಂಡಂತೆ ಅದೇ ಸ್ಥಳದಲ್ಲಿ ಮಗುವೊಂದಕ್ಕೆ ಯಾವುದೋ ಹಣ್ಣನ್ನು ತಿನ್ನಿಸುತ್ತ ಕುಳಿತಿದ್ದಳು.
ಬಹಳ ದಿನಗಳ ನಂತರ ನನ್ನನ್ನು ಕಂಡದ್ದಕ್ಕೆ ವಿಚಲಿತಗೊಳ್ಳಲಿಲ್ಲ. ಬದಲಾಗಿ ಶಾಂತ ವರ್ತನೆಯಲ್ಲಿಯೇ.. ಮುಂದಿದ್ದ ಖಾಲಿ ಕುರ್ಚಿಗೆ ಕುಳಿತುಕೊಳ್ಳುವಂತೆ ಕೈಸನ್ನೆ ಮಾಡಿದಳು. ಅದೇ ಸಕ್ಕರೆ ರಹಿತ ಚಹಾ ಆರ್ಡರ್ ಮಾಡಿಯೂ ನನ್ನನ್ನು ಕತ್ತೆತ್ತಿ ನೋಡಲಿಲ್ಲ. ಚಹಾ ಕುಡಿವಾಗ ಮಾತ್ರಾ ಒಂದೇ ಒಂದು ಬಾರಿ ಅಂತಃಕರಣ ತುಂಬಿದ ನೋಟ ಬೀರಿದಳು. ಕಪ್ಪಿನೊಳಗಿನ ಚಹಾ ಮುಗಿಯುತ್ತಾ ಬಂದರೂ, ಒಂದೇ ಒಂದು  ಮಾತೂ ಆಡದ ಇವಳನ್ನ ಏನೆಂದು ಅರ್ಥೈಸಿಕೊಳ್ಳಲಿ? ಎಂದು ತಲೆ ಕೆರದುಕೊಳ್ಳುವಷ್ಟರಲ್ಲಿ; ನನ್ನ ಮುಂದೊಂದು ಲಕೋಟೆಯನ್ನಿಟ್ಟು ಮಗುವನ್ನೆತ್ತಿಕೊಂಡು ಹೊರಟೇ ಹೋದಳು. ಹಿಂದಿರುಗಿ ನನ್ನ ಊರಿಗೆ ಬರುವವರೆಗೂ, ಆ ಲಕೋಟೆಯೊಳಗೆ ಏನಿದೆ? ಎಂದು ಕುತೂಹಲಕ್ಕೂ ತೆರೆದು ನೋಡಲಿಲ್ಲ. ಹುಡಿಗಿಯರ ಮನಸ್ಸೇಕೆ ಇಷ್ಟೊಂದು ವಿಚಿತ್ರ? ಇವರನ್ನ ಸಂಪೂರ್ಣವಾಗಿ ಅರ್ಥಮಾಡಿಕೊಂಡ ಒಬ್ಬ ತಗ್ನನಾದರೂ ನಾನು ಸಾಯುವುದರೊಳಗಾಗಿ ನನಗೆ ಸಿಗಬಲ್ಲನೇ? ಎಂದು ಯೋಚಿತ್ತಲೇ ಕೋಣೆಯ ಬಾಗಿಲು ಹಾಕಿಕೊಂಡು ಅವಳ ಲಕೋಟೆಯೊಳಗಿನ ಪತ್ರ ಬಿಡಿಸಿ ಓದತೊಡಗಿದೆ.
  ಹೇ.. ಹುಡುಗಾ..,
  ಹಿಂದಿನ ಬಾರಿ ಬರೆದ ಪತ್ರವೇ ಕೊನೆ ಎಂದು ಬರೆದಿದ್ದೆ. ಆದರೆ ಕೊನೆಯದೆಂದು ಬರೆದಾದ ನಂತರವೂ ನಿನಗೆ ಎರಡು ಪತ್ರ ಬರೆದೆ. ಒಂದು ಬಳ್ಳಾರಿಗೆ ಬರಲು ಬರೆದೆ. ನಂತರ ನೀನೀಗ ಓದುತ್ತಿರುವ ಪತ್ರ ಬರೆದೆ. ಈ ಪತ್ರವನ್ನು ನಿನಗೆ ಬರೆಯಲೇ ಬೇಕಿತ್ತು. ಅಂಚೆಯ ಮೂಲಕ ರವಾನಿಸೋಣವೆಂದುಕೊಂಡೆ. ಆದರೆ ಇನ್ನೊಮ್ಮೆ ಮುಖಾ-ಮುಖಿ ನೋಡಬೇಕೆನಿಸಿದ ಪರಿಣಾಮ ನಿನ್ನನ್ನು ಭೇಟಿಯಾಗಲು ತಿಳಿಸಿದೆ. ಅಂದಹಾಗೆ ಹಿಂದಿನ ತಿಂಗಳು ನೀ ನಂಬದ ದೇವರು ನನ್ನ ತಾಳಿಯನ್ನ ಕಿತ್ತುಕೊಂಡ. ನೀನು ಬಂದಾಗ; ನಾನು ಕತ್ತು ಬಗ್ಗಿಸಿ ಕುಳಿತದ್ದು ನಿನ್ನ ಕಣ್ಣಿನ ನೋಟ ಎದುರಿಸಲಾಗದೇ ಅಲ್ಲ, ಕತ್ತಿನಲ್ಲಿರದ ಮಾಂಗಲ್ಯ ಎಲ್ಲಿ? ಎಂದು ಕೇಳಬಾರದೆಂದು. ನನ್ನ ಗಂಡನೆಂಬುವವನು ಹೊಟ್ಟೆಕಿಚ್ಚಿಗಾಗಿ ನನಗೆ ಗಂಡು ಮಗು ಕೊಟ್ಟು ಹೋಗಿದ್ದರೂ, ಆ ಮಗುವಿಗಾಗಿ ನಾನು ಬದುಕಿದ್ದೇನೆಂದು ತಿಳಿಯಬೇಡ. ನಿಜಕ್ಕೂ ನಿನ್ನನ್ನು ಇನ್ನೊಮ್ಮೆ ನನ್ನ ಕಣ್ಣಲ್ಲಿ ತುಂಬಿಕೊಳ್ಳಲು ಬದುಕಿದ್ದೆ.
ನಾನು ಸಾಯಲು ನಿರ್ಧಾರ ತೆಗೆದುಕೊಂಡಿದ್ದೇನೆ. ಸತ್ತು ಸಾಧಿಸುವುದಾದರೂ ಏನು? ಎಂಬ ಎಲ್ಲರ ಪ್ರೆಶ್ನೆಯನ್ನು ಧಿಕ್ಕರಿಸಿದ್ದೇನೆ. ಏಕೆಂದರೆ ನನ್ನ ಸ್ಥಾನದಲ್ಲಿ ನೀನಿದ್ದರೂ, ಇದೇ ನಿರ್ಧಾರಕ್ಕೆ ಬರುತ್ತಿದ್ದೆ.
ಕಾರಣ ಸತ್ತು ಹೋಗಿರುವ ನನ್ನ ಗಂಡ ಆಕಸ್ಮಿಕವಾಗಿ ಸತ್ತಿಲ್ಲ. ಏಡ್ಸ್ ಎಂಬ ಭಯಂಕರ ರೋಗಕ್ಕೆ ತುತ್ತಾಗಿ ಸತ್ತಿದ್ದಾನೆ. ಮಗುವಿಗೂ ಅವನದೇ ರಕ್ತ. ಅಂದರೆ ಮಗುವಿನಲ್ಲಿಯೂ ಎಚ್.ಐ.ವಿ. ವೈರಸ್ಗಳಿವೆ,ನಾನು ಮತ್ತು ನನ್ನ ಮಗು ಬಹಳ ದಿನ ಬದುಕಲಾರೆವು. ಬದುಕಿದಷ್ಟೂ ಸಮಾಜದಲ್ಲಿ ಅವಮಾನ ಭರಿಸಲಾರೆವು.
ಅದಕ್ಕೆಂದೇ ನನ್ನ ಈ ನಿರ್ಧಾರ. ಅಂದು ಪ್ರೀತಿಗೆ ವಿದಾಯ ಹೇಳಿದೆ. ಇಂದು ಬದುಕಿಗೆ ವಿದಾಯ ಹೇಳುತ್ತಿದ್ದೇನೆ. ಮುಂದಿನ ಜನ್ಮದಲ್ಲಾದರೂ ಒಂದಾಗಲು ದೇವರಲ್ಲಿ ಬೇಡಿಕೊಳ್ಳೋಣವೆಂದರೆ; ನೀನು ದೇವರನ್ನೇ ನಂಬದ ನಾಸ್ತಿಕ! ನೀನಾದರೂ ಇದ್ದಷ್ಟು ದಿನ ಧರೆಯ ಮೇಲೆ ಚನ್ನಾಗಿರು..
                                         ಇಂತಿ..
                         ನಿನ್ನಿಂದ ಶಾಶ್ವತವಾಗಿ ದೂರಾಗುತ್ತಿರುವ ಗೆಳತಿ…….
ಪತ್ರ ಓದುತ್ತಿದ್ದಂತೆ ಕಣ್ಣಲ್ಲಿನ ನೀರು ಕೆನ್ನೆಯ ಮೇಲೆ ಹೆಪ್ಪುಗಟ್ಟಿದ್ದವು. ಇದು ನನ್ನ ಮತ್ತು ಅವಳ ಕಥೆ…!
               ನಾಗರಾಜ್, ತಳವಾರ್

 





ನಿನ್ನ ಒಡಲ ಬಸಿರಾಗಿ ಮತ್ತೆ ಹೊರ ಬರಲು ತವಕಿಸುತ್ತೇನೆ…..!

23 02 2009

ನನ್ನೊಳಗಿನ ನಾನು ಕಳೆದು ಹೋಗುತ್ತಿರುವುದು ಪ್ರಾಯಶಃ ನಿನ್ನ ಮೌನದಿಂದಲೇ ಇರಬೇಕು. ಅವತ್ತು ಇದ್ದಕ್ಕಿದ್ದಂತೆ ಎದ್ದು ಹೋದೆಯಲ್ಲ; ಹೋದದ್ದಾದರೂ ಎಲ್ಲಿಗೆ..? ನಲ್ಲನನ್ನು ಒಲ್ಲೆ ಅನ್ನದೇ ಮೌನದಾ ಹಾದಿ ತುಳಿದು ಮನೆಯವರು ಒಪ್ಪಿದ್ದ ಅಚ್ಚುಕಟ್ಟಾದ ಆತನ ಬದುಕಿನೊಳಕ್ಕೆ ಕಾಲಿಟ್ಟೆಯಂತೆಲ್ಲ..?  ನನ್ನಲ್ಲೇ ಬಿಟ್ಟು ಹೋಗಿರುವ ನಿನ್ನ ಕಣ್ಣ ಕಂಬನಿ, ದ್ವಂದ್ವ ಸ್ಥಿತಿ, ಅಪಕ್ವ ನಿಧಾ೯ರ, ನಿನ್ನ ಅಸಹಾಯಕತೆಯನ್ನ ಅದೆಲ್ಲಿ ಹೂತಿಡಲಿ…?
ನನ್ನ ಖಿನ್ನತೆ ಇರುವುದು, ನೀ ಹೋದುದಕ್ಕಲ್ಲ, ಹೋಗುವ ಆ ಅರೆ ಘಳಿಗೆಯಲ್ಲಿ ಅಷ್ಟೊಂದು ದುಗುಡದ ದುಃಖವನ್ನ ಅದ್ಯಾವ ಮುಟುಗೆಯಲ್ಲಿ ಹಿಡಿದಿಟ್ಟು ಕೊಂಡು,ನಿನ್ನ ಎದೆಯೊಳಗಿನ ಆರ್ತನಾದದ ಆಕ್ರಂದನಕ್ಕೆ ಸಾಂತ್ವಾನದ ಹಾಲುಣಿಸಿದ ಬಗೆ ಯಾದರೂ ಹೇಗೆ…? ಎಂಬುದರ ಬಗ್ಗೆ.imagesca0me7rq3
ತಪ್ಪು ನಿನ್ನ ಮನಸ್ಥಿತಿಯದಾ..ಪರಿಸ್ಥಿಯದಾ..? ಅದು ನನಗೆ ಬೇಡವಾಗಿದೆ. ಮೊದಲು ಅಲ್ಲಿ ನೀ ಹೇಗಿದ್ದೀಯ ಹೇಳಿಬಿಡು, ನಿನ್ನ ಬದುಕಿನ ಚೌಕಟ್ಟಿನಲ್ಲಿ ನೀನು ಚಂದಗಿದ್ದರೆ ಸಾಕು ಜೀವವೇ…! “ಬಿಟ್ಟು ಬಂದ ನನ್ನ ನಲ್ಲನ ನಿಟ್ಟುಸಿರು….ನನ್ನನ್ನ ಸುಮ್ಮನೇ ಬಿಟ್ಟೀತೇ..” ಎಂಬ ದಿಗಿಲು ಖಂಡಿತಾ ನಿನಗೆ ಬೇಡ. ಅಷ್ಟೊಂದು ಪ್ರೀತಿಸುತ್ತಿದ್ದ ನನ್ನವ್ವ ಕೂಡ ಒಮ್ಮೆ ಇದ್ದಕ್ಕಿದ್ದಂತೆ ಏನನ್ನೂ ಹೇಳದೇ ಜಗತ್ತೇ ಬಿಟ್ಟು ಹೋದಳು; ನನ್ನನ್ನು ತಬ್ಬಲಿಮಾಡಿ. ಅವತ್ತಿನ ಯಾತನೆಗೂ ಇವತ್ತಿನದಕ್ಕೂ ಯಾವುದೇ ವ್ಯತ್ಯಾಸ ನನಗೆ ಕಾಣುತ್ತಿಲ್ಲವಾದ್ದರಿಂದ, ನೀನು ಆತಂಕ ಪಟ್ಟರೆ ಅದಕ್ಕೆ ಅರ್ಥ ಇರುವುದಿಲ್ಲ.
ಬದುಕಿನ ಮೌಲ್ಯಗಳನ್ನರಿತ ಮತ್ತು ಮತ್ತೊಬ್ಬರಿಗೆ ಜೀವನೋತ್ಸಾಹ ತುಂಬುವ ಜೀವಿಯಾದ ನಿನಗೆ ಮೋಸಗೊತ್ತಿಲ್ಲವೆಂದು ನನಗೆ ಗೊತ್ತಿದೆ. ನಿನ್ನ ತುಂಬು ಕುಟುಂಬದ ಒಕ್ಕೊರಿಲಿನ ಒಪ್ಪಂದಕ್ಕೆ ಮಣಿದು ಅವರ ಮನಸ್ಸನ್ನ ಘಾಸಿಗೊಳಿಸಲು ಇಚ್ಛಿಸದೇ ನೀ ಈ ಮದುವೆಗೆ ಒಪ್ಪಿರುವೆ ಎಂಬ ಅಭಿಪ್ರಾಯ ನನ್ನದಾಗಿದೆ. ಬಿಡು ಯಾತನೆ ಎಂಬುದು ಯಾರನ್ನು ಬಿಟ್ಟಿದೆ..? ಒಂದಿಲ್ಲ ಒಂದು ಪಾತ್ರದಲ್ಲಿ ಅದು ಪ್ರತಿಯೊಬ್ಬರನ್ನೂ ಕಾಡುತ್ತಲೇ ಇರುತ್ತದೆ. ಆದರೆ ನನ್ನ ಪಾಲಿಗೆ ಇದು ಕಾಡುವ ಪರಿ ಇದೆಯಲ್ಲಾ…? ನಿಜಕ್ಕೂ ನನ್ನ ಶತೃವಿಗೂ ಬೇಡ. ಅವ್ವ ನನ್ನ ಬಿಟ್ಟು ಹೋದಾಗಿನಿಂದ ಅಪ್ಪ ದೂರದೂರಿನಲ್ಲಿರುವ ಅಣ್ಣನ ಮನೆಗೆ ಹೋಗಿಬಿಟ್ಟ. ಅಕ್ಕಂದಿರು ಗಂಡನ ಮನೆಯಲ್ಲಿ ತಣ್ಣಗಿದ್ದಾರೆ. ನಿನಗಾಗಿ ಜಾತಿ, ಸಮಾಜವನ್ನೇ ಮೊದಲೇ ಧಿಕ್ಕರಿಸಿದ್ದೆ. ನನ್ನ ಪಾಲಿಗೆ ಉಳಿದಿದ್ದು ಅವ್ವಳ ನೆನಪು ಮತ್ತುನೀನು ಮಾತ್ರ. ಈಗ ನೀನೂ ಆಟ ಮುಗಿಯಿತೆಂಬತೆ ಹೊರಟು ಹೋಗಿಬಿಟ್ಟೆ. ಹುಬ್ಬೆಗರಿಸಿ ಪ್ರೆಶ್ನೆ ಕೇಳುವ ಸಮಾಜಕ್ಕೆ; ನನ್ನಲ್ಲಿ ಉತ್ತರ ಇದೆಯಾದರೂ..ಎಲ್ಲಿ? ಮನೆಯ ಕೋಣೆಯ ಹೊಕ್ಕು ತೀರ ಕುಬ್ಜನಾಗಿದ್ದೇನೆ. ಹಾಗೆಯೇ ಬಿಕ್ಕಳಿಸುತ್ತಾ ಗೋಡೆಗೊರಗಿ ಕುಳಿತು ಅವ್ವಳ ಭಾವ ಚಿತ್ರ ನೋಡುತ್ತಿದ್ದೇನೆ, ಯಾರೂ ಇಲ್ಲದ ಅನಾಥನಾಗಿ. ತುಂಬಾ ಅಳು ಬರುತ್ತಿದೆ..ಅತ್ತು ಹಗುರಾಗಲು ಯಾರ ಹೆಗಲೂ ಆಸರೆಇಲ್ಲ ಅಂದಮೇಲೆ ನಾನು ಅವ್ವಳ ಮತ್ತು ನಿನ್ನ ನೆನಪುಗಳೊಡನೆ ಈ ಜಗತ್ತಿನ ಪಾಲಿಗೆ ಇನ್ನಿಲ್ಲವಾಗಬಯಸುತ್ತೇನೆ ಮತ್ತು ನಿನ್ನ ಒಡಲ ಬಸಿರಾಗಿ ಮತ್ತೆ ಹೊರಬರಲು ತವಕಿಸುತ್ತೇನೆ…!
                                          ಇಂತಿ,
                                               -ನಾಗು,ತಳವಾರ್.





ಮುನಿದ ಮನದೊಳಗಿನ ಸಾಲು..!

30 01 2009

images15ಅರ್ಥವಿಲ್ಲದಾ
ಜೀವನ ವ್ಯರ್ಥ ಎಂದು ಕೇಳಿ
ಅರ್ಥ ಹುಡುಕಲು ಹೊರಟು
ಜೀವನದ ಅರ್ಧ ಆಯುಷ್ಯವನ್ನೇ
ಕಳೆದುಬಿಟ್ಟೆ.

*************

ನನ್ನದಲ್ಲದಾ ತಪ್ಪಿಗೆ,
ನೀ ಪ್ರೀತಿಸುತ್ತಿಲ್ಲ ಏಕೆ ತೆಪ್ಪಗೆ?
ನಾ ಕಪ್ಪಗಿರುದು
ನನ್ನ ತಪ್ಪಲ್ಲ
ನನ್ನ ಅಪ್ಪನದು.
***************

ಇದಾ..ಬದುಕು..!
ಮೊದಲೇ ಗೊತ್ತಿದ್ದರೆ
ತಾಯಿಯ ಹೊಟ್ಟೆಯಲ್ಲೇ
ತಣ್ಣಗಿರಬಹುದಿತ್ತಲ್ಲ?
*********

ಕಲ್ಲು ಸಣ್ಣದಿದ್ರೂ ಕಣ್ಣಾಗ ಬಿದ್ರ
ಅದ್ರ ನೋವು ಎಂಥಹದ್ದೇಳು?
ನೀ ಒಲ್ಲೆ ಎಂದು ಹೊರಟು ಹೋದ್ರ
ನನ್ನದೆಂಥಹ ಗೋಳು ಹೇಳು..?
**********





ಅವ್ವಗೂ..ಒಂದು ಶಾಯಿರಿ…!

13 01 2009

ಅದೋನೋ..ಭಯ, ದಿಗಿಲು
ಆತಂಕ..
ಸತ್ತುಹೋಗುತ್ತೇನೆಂದಲ್ಲ
ಇಲ್ಲಿ ಇನ್ನೂ ಬದುಕಬೇಕಲ್ಲ? ಎಂದು.
    ಅದೇನೋ..ಕಣ್ಣೆಲ್ಲಾ ಮಂಜು-ಮಂಜು
    ಉರಿ,ಉರಿ
    ಯಾವುದೋ ಬೇನೆಯಿಂದಲ್ಲ,
    ಇಲ್ಲಿ ನೀನಿಲ್ಲವಲ್ಲ ಎಂದು..!

              ನಾಗು,ತಳವಾರ್.








Follow

Get every new post delivered to your Inbox.