ಹುಡುಗೀ, ಅವತ್ತು ಪೂರ್ವಾಹ್ನ ನಿಮ್ಮೂರಿನ ಊರ ಹೊರಗಿನ ದೇವರ ಜಗುಲಿಯ ಮೇಲೆ ಹಾಗೇ ಒಬ್ಬರಿಗೊಬ್ಬರು ಏನೊಂದೂ ಮಾತಾಡಿಕೊಳ್ಳದೇ; ಇಡೀ ಬದುಕೇ ಮುಗಿದು ಹೋದವರಂತೆ ಕುಳಿತಿದ್ದೆವಲ್ಲ? ಇವತ್ತು ಆ ಗುಡಿಯನ್ನೇ ಸೇವಾ ಸಮಿತಿಯವರು ನೆಲಸಮ ಮಾಡಿದ್ದಾರೆ. ಅದೇನೋ ಜೀರ್ಣೋದ್ಧಾರ ಹಣ ಸಂಗ್ರಹಿಸಿ ಇಡೀ ದೇಗುಲವನ್ನೇ ಹೊಸದಾಗಿ ನಿರ್ಮಿಸುವ ಯೋಜನೆಯಂತೆ ಅವರದ್ದು. ಎಂದೂ ಯಾರೊಂದಿಗೂ ಮಾತನಾಡದ ಆ ಕಲ್ಲು ದೇವರ ಮೇಲಿರುವ ನಂಬಿಕೆಯಲ್ಲಿ ಜೀವ ಇರುವ ನಮ್ಮಂತಹ ಎಳೆ ಹೃದಯಗಳ ಬಗ್ಗೆ ಕೊಂಚ ಹಿಡಿ ಮಮಕಾರ ಬೆಳಸಿಕೊಳ್ಳಲಾರದ ಸಮೂಹದ ಬಗ್ಗೆ ನನಗೆ ಅಯ್ಯೋ ಅನಿಸುತ್ತಿದೆ. ಮುರಿದ ಮನೆ- ಮಂದಿರಗಳನ್ನೆಲ್ಲಾ ಹೇಗೋ ಪುನಃ ಸರಿಪಡಿಸಿಕೊಳ್ಳಬಹುದು, ಆದರೆ ಸಂಪ್ರದಾಯ-ಆಚರಣೆ ಆಡಂಬರದಲ್ಲಿ ಎರಡು ಹೃದಯಗಳನ್ನು ಬೇರ್ಪಡಿಸಿ ಛಿದ್ರ ಛಿದ್ರಗೊಳಿಸಿತಲ್ಲ ಈ ನಮ್ಮ ಜಾತಿ, ಸಮಾಜ; ಇದನ್ನೆಲ್ಲಾ ಪುನಃ ಹೊಂದುಗೂಡಿಸಿ ಆ ಚೈತನ್ಯ, ಆ ದಿವ್ಯ ಸಂತಸವನ್ನ ಮತ್ತು ಮರೆಯಲಾರದ ಆ ಕ್ಷಣಗಳನ್ನ ನಮ್ಮ ಬೊಗಸೆಗೆ ತಂದಿಟ್ಟೀತೇ ಈ ನಮ್ಮ ಗೊಡ್ಡು ಸಂಪ್ರದಾಯದ ಸಮಾಜ….?
ದಿನಗಳು ಅದೆಷ್ಟು ಬೇಗ ಉರುಳಿಹೋಗುತ್ತವೆಲ್ಲವೇ? ನಾನು ನೀನು ಕೈ -ಕೈ ಹಿಡಿದುಕೊಂಡು ಅದೆಂದೂ ಹೋಗದ ರಸ್ತೆಯಲ್ಲಿ ಸುಮ್ಮನೇ ಈಡೇರದ ಭವಿಷ್ಯತ್ತಿನ ಕನಸು ಕಾಣುತ್ತಾ, ಕಂಡ ಕನಸಿನ ಬಗ್ಗೆ ದೂರವಾಣಿಯಲ್ಲೇ ಸಾಧ್ಯ ಅಸಾಧ್ಯಯಗಳ ಬಗ್ಗೆ ವಿಶ್ಲೇಷಿಸಿ ಕೊಳ್ಳುತ್ತಾ! ಪುಟಗಟ್ಟಲೆ ಪ್ರೇಮ ಕಾವ್ಯದ ಪತ್ರ ವಿನಿಮಯ ಮಾಡಿಕೊಂಡ ಆ ದಿನಗಳು ಮೊನ್ನೆ- ಮೊನ್ನೆ ತಾನೇ ಜರುಗಿವೇನೋ ಅನಿಸುತ್ತಲಿವೆ ಅಲ್ಲವೇ……?
ನಿನು ಹೋದಾಗಿನಿಂದ ಬದುಕು ನಿಜಕ್ಕೂ ನಿಂತಲ್ಲೇ ನಿಂತಿದೆ. ಆದರೆ ನಿನ್ನ ಬದುಕಿನಲ್ಲಾದ ತಿರುವುಗಳಿಂದ ನಾನಿನ್ನು ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಮನೆಯವರ ಒಕ್ಕೊರಲಿನ ಆರ್ತನಾದಕ್ಕೆ; ಒಲವ ತೊರೆದು ಮತ್ತೊಬ್ಬನೊಂದಿಗೆ ತಾಳಿ ಕಟ್ಟಿಸಿಕೊಂಡ ನಿಸ್ಸಹಾಯಕ ಹೆಣ್ಣೇ….! ನಿನ್ನಂಥವಳು ಈ ಧರೆಗೆ ಮೊದಲೇನಲ್ಲ ಬಿಡು, ಅದೆಷ್ಟೋ ಹೆಣ್ಣುಗಳು ಒಲ್ಲದ ಗಂಡಸಿನೆದುರು ಕಣ್ಣೀರಿನಲ್ಲೇ ತಾಳಿ ಕಟ್ಟಿಸಿಕೊಳ್ಳುತ್ತಿದ್ದರೂ ಆಕೆಯ ಹಿಂದಿರುವ ಸಖಿಯರು “ತವರು ಮನೆಯನ್ನ ಮರೆಯ ಬೇಕೆಂದು ಈಗಲೇ ಕಣ್ಣೀರಿಟ್ಟ್ರೆ ಹೇಗೆ?” ಎಂದು ತಿಳಿಯಾದ ಲೇಪನ ಹಚ್ಚಿ ಆಕೆಗೆ ಇನ್ನಷ್ಟು ಅಳಲು ಸ್ವತಂತ್ರ ಕೊಡುತ್ತಾರೆ.
ಇಂತಹ ಸ್ಥಿತಿಯಲ್ಲೇ ನೀನು ಆತನ ಮನೆಯನ್ನು ಸೆರಿದೆಯೆಂದು ಕೇಳಲ್ಪಟ್ಟೆನಾದರೂ, ಅಂಗಳದಲ್ಲಿ ಆಟಕ್ಕೆ ಬಿಟ್ಟ ಮಗು ತಕ್ಷಣ ಕಣ್ಮರೆಯಾದಾಗ ಆಗುವ ತಾಯಿಯ ಆತಂಕ ನಿನ್ನದಾಗುತ್ತದೆಂದು ಭಾವಿಸಿದ್ದೆನಾದರೂ, ನಂತರ ತಿಳಿದಿತ್ತು; ಮದುವೆಗೆ ಮುಂಚೆ ಹಡೆದುಕೊಂಡ ಮಗುವನ್ನು ಯಾವ ಹೆಣ್ಣು ತಾನೇ ನನ್ನ ಮಗುವೆಂದು ಮುದ್ದಿಸಿಯಾಳು? ಆತ್ಮಗೌರವಕ್ಕಾಗಿ ತಿಪ್ಪೆಗೆ ಬಿಸಾಕಿದ ಮಗುವಿನ ಸ್ತಿತಿ ನನ್ನ್ನದಾಗಿತ್ತೆಂದು ನಂತರ ನನಗೆ ಗೊತ್ತಾಗಿತ್ತು. ಹಾಗೆ ಬಿದ್ದ ಮಗುವನ್ನು ಮತ್ತ್ಯಾರೊ ಹೊತ್ತೊಯ್ದು ಮುದ್ದಿನಿಂದ ಸಾಕಿ ಸಲುಹಿದಂತೆ: ನಿನ್ನ ನೆನಪಲ್ಲೇ ಬದುಕಿದ್ದ ನನ್ನನ್ನು ಪುನಃ ವಾಸ್ತವ ಪ್ರಪಂಚಕ್ಕೆ ತಂದು- ಮೋಸದ ನಂತರವೂ ಬದುಕುವ ಮೋದವನ್ನ ಕಲಿಸಿಕೊಟ್ಟ ತಾಯಿ ಹೃದಯದ ಗೆಳತಿಯೊಬ್ಬಳ ಮಡಿಲೊಂದು ನನಗೆ ದೊರೆಯಿತು. ನಿಜಕ್ಕೂ “ಮುಂದಿನ ಜನ್ಮವೊಂದಿದ್ದರೆ ನಿನ್ನ ಮಗುವಾಗಿ ಹುಟ್ಟಿ ನಿನ್ನ ಋಣ ತೀರಿಸುತ್ತೇನೆ” ಎಂದು ಆ ಗೆಳತಿಯ ತಂಪನೆಯ ಹಸ್ತದ ಮೇಲೆ ಪ್ರಮಾಣ ಮಾಡಿ ಎದ್ದು ಬಂದು ಮತ್ತೆ ನನ್ನ ಸಮೂಹದಲ್ಲೇ ಬೆರೆತುಕೊಂಡೆ.
ಅಂದ ಹಾಗೆ ಮೊನ್ನೆ ಕಾರ್ತಿಕ ಮಾಸದ ಮೊದಲು ಅದೇ ಆಪ್ತ ಗೆಳತಿ ನನ್ನ ನೋಡಿಕೊಂಡು ಹೋಗಲು ಬಂದು; ನಿನ್ನ ಬಗ್ಗೆ, ನಿನ್ನ ಮಗುವಿನ ಬಗ್ಗೆ ಮಾತಡಿದಳು. ಅದೇನು ನೀನು ಮಗುವಿಗೆ ನನ್ನ ಹೆಸರನ್ನ ಇಟ್ಟಿರುವೆ ಎಂದು ಕೇಳಿ; ಹೆಣ್ಣಿನ ಅಂತರಾಳದ ನಿಜವಾದ ಅನ್ವೇಶಕ ಒಬ್ಬವನಾದರೂ ಇಲ್ಲಿ ಹುಟ್ಟಿ ಬಂದಿರಬಹುದೇ ಎಂದು ದಿಗ್ಮೂಢನಾಗಿ ಕುಳಿತುಬಿಟ್ಟೆ, ಅಲ್ಲದೇ ನಿನ್ನ ಗಂಡ ನಿಮ್ಮಿಬ್ಬರ ಸಂಸಾರದಿಂದ ಅರ್ಧಕ್ಕೆ ಎದ್ದು ಹೋದನೆಂದು ಕೇಳಲ್ಪಟ್ಟೆ ತುಂಬಾ ವ್ಯಥೆಯಾಯ್ತು ಹುಡುಗೀ, ನಿನ್ನ ಬದುಕು ನನ್ನ ಪಾಲಿಗೆ. ಮೊದಲೇ ನಾನು ಭಾವುಕ; ನಿನ್ನ ವಿಳಾಸವನ್ನ ಗೆಳತಿ ಕೊಡಲಿಲ್ಲ, ದೂರವಾಣಿ ಸಂಖ್ಯೆಯಂತೂ ಸಿಗಲೇ ಇಲ್ಲ. ಸಧ್ಯ ಈ ಪತ್ರವಾದರೂ ನಿನಗೆ ಸಿಗಬಹುದಾ…? ಗೊತ್ತಿಲ್ಲ.
ನನ್ನ ಮನಸಿನ ಸಮಾಧಾನಕ್ಕಾದರೂ ಈ ಪತ್ರ, ಹೇಗಾದರೂ ನಿನಗೆ ಸಿಗಲಿ ಎಂಬ ನಂಬಿಕೆಯೊಂದಿಗೆ,
ಪ್ರೀತಿಯ ಅಣ್ಣ,
ಒಳ್ಳೆಯ ಲೇಖನ….. ನಿಮ್ಮ ಪತ್ರ ಆ ಹುಡುಗಿಗೆ ಆದಷ್ಟು ಬೇಗ ತಲುಪಲಿ……!!??
ವಾಸ್ತವ ಜೀವನದ ಎಳೆ ಹಿಡಿದು ಬರೆದಿರುವುದು ಗೋಚರಿಸುತ್ತಿದೆ…..
tumbaa chennaagi bardiddeera anna…. heege munduvaresi…