ಎಲ್ಲಿ ಲಭ್ಯ..?
————-
ಅಂಗಳದ ಮೂಲೆಯಲಿ
ಮೂರು ಕಲ್ಲನಿಟ್ಟು,ಮಾಡುತ್ತಿದ್ದ ಅವ್ವಳ ಕೋಳಿ ಸಾರು.!
ನೆರಿಕೆಯ ಸಂದಿಯಿಂದ
ಒಂದಷ್ಟು ಕೂದಲು ಕೊಟ್ಟರೆ..
ಗೂಟಕ್ಕೆ ಸುತ್ತಿ ಮಾರುತ್ತಿದ್ದ ಮಿಠಾಯಿ
ತಾಳಿಗರಿಯಲ್ಲಿ ಕಡ್ಡಿ ಚುಚ್ಚಿ
ಭವಿಷ್ಯ ಹೇಳುತ್ತಿದ್ದ ಕುಂಡು ರಾಮುಡು,
ಗುಡಿಯ ಅಂಗಳಕೆ
ಗೋಣೀ ಚೀಲ ಹಾಕಿ
ಧುಪ್ಪನೆ ಹೋರಿ ಬೀಳುಸುತ್ತಿದ್ದ
ಲಾಲು ಕಟ್ಟೋ ಸಾಬು.
ಊರ ಗೌಡರ ಬಿಳೀ ಮನೆಯ
ಗೋಡೆಗೆ ತೋರಿಸುತ್ತಿದ್ದ
ಮೂಕ ಸಿನಿಮಾ,
ಮಣ್ಣು ಹಾಕಿ..ಚಡ್ಡಿ ಹರಿಯುವಂತೆ
ಆಡಿದ ಜಾರಿಕಿ ಬಂಡಿ,ಲಗೋರಿ,ಚಿಣ್ಣಿ ದಾಂಡು,
ಬುಗುರಿ.ಗೋಲಿ,ಸಿಗರೇಟಿನ ಚಾಫ..
ಸಣ್ಣಪ್ಪ ಮಾಡಿದ ಬಯಲಾಟದ ಸಂಗ್ಯಾನ ಪಾತ್ರ,
ಉಗಾದಿಗೆ ಹನುಮಪ್ಪನ ಹೊಕ್ಕಳ ಗುಂಡಿಗೆ ಹಾರಿ
ಹರಿದ ಕಾಯಿ.
ಕೊನೆ..ಕೊನೆಗೆ ಗೌರಿ ಹಬ್ಬದ
ಆಕೆಯ ಆರತಿ ತಟ್ಟೆಗೆ; ಕಟ್ಟೆಯ ಮೇಲೇ ಕಾದು ಕುಳಿತ ಘಳಿಗೆ,
ಇವಿಷ್ಟೂ… ದುಬಾರಿಯ ಈ..
ಮೈಕ್ರೊ ಸಿಮ್ಮಿನ ಎನ್ರಾರ್ಡ್ ಸ್ಮಾರ್ಟ್ ಪೋನ್ ನಲ್ಲಿ
ಮರುಕಳಿಸಿ ಕೊಡುವ ಸಾಪ್ಟ್ವೇರ್ ಲಭ್ಯವಿದೆಯಾ..?
ನಾಗು,ತಳವಾರ್.
ನಿಮ್ಮದೊಂದು ಉತ್ತರ