ಯಾವ ಬಂಧನಗಳಲ್ಲಿವೆ? ಇಂದಿನ ಸಂಬಂಧಗಳು….!
————————————————
ಆತ ಆ ಕಡೆಯಿಂದ ಒಂದೇ ಸಮನೆ ದೂರವಾಣಿಯಲ್ಲಿ ಬಿಡುವಿಲ್ಲದೆ “ಇಲ್ಲ ಕಣೋ ನನ್ನಿಂದ ಸಾಧ್ಯವಾಗುತ್ತಿಲ್ಲ,ನನಗೆ ಡೈವೋರ್ಸ್ ಕೊಡಿಸಿ ಬಿಡು , ನಿನಗೆ ಕಾಲಿಗೆ ಬೀಳುತ್ತೇನೆ.ಯಾವನಿಗೆ ಬೇಕು ಈ ಸಂಸಾರ..? ನನಗೆ ಉಸಿರು ಕಟ್ಟಿಸಿಬಿಟ್ಟಿದೆ..ಪ್ಲೀಜ್ ಮರಾಯ ನನಗೆ ಬಿಡುಗಡೆ ಬೇಕು,ಈ ಬಂಧನದಿಂದ.”ಎಂದು ಗದ್ಗದಿತನಾಗಿ ರಾತ್ರಿ ಮಲಗುವ ಮುನ್ನ ಬಿಕ್ಕಳಿಸಿಸುತ್ತಾ..ಹೇಳುತ್ತಿದರೆ: “ಇಷ್ಟೊತ್ತಿನಲ್ಲಿ ಆ ಪೇಪರ್ ಸಿಗೊಲ್ಲ,ಬೆಳಿಗ್ಗೆ ನೋಡೋಣ ಮಲಗು” ಅಂತ ಪೋನಿಟ್ಟೆ.ಪಕ್ಕದಲ್ಲಿ ಮಲಗಿದಂತೆ..ಮಲಗಿರದ ನನ್ನ ಶ್ರೀಮತಿ “ಯಾರ್ದುರೀ ಇಷ್ಟೊತ್ತಿನಲ್ಲಿ ಫೋನ್,ಯಾವ್ ಪೇಪರ್..?” ಅಂದಳು. ಜನಾರ್ದನ್ ರೆಡ್ಡಿ ಮೈನಿಂಗ್ ಪೇಪರ್.,ಇಲ್ಲೇ ಬೀರುವಿನಲ್ಲಿ ಇಟ್ಟಿದ್ದೆ,,ನೋಡಿದೆಯಾ..? ಅಂದೆ. ನನ್ಗೆ ಗೊತ್ತಿಲ್ಲ ಅಂತ ರಗ್ಗು ಹೊದ್ದು ಮಲಗಿದಳು.ಈ ಹೆಂಗಸಿರಿಗೆ ಅದೇನು ಚಾಳಿಯೋ..!ಯಾವುದೇ ಪೋನ್..ಬರ್ಲಿ.ಯಾರ್ದು..? ಏನಂತೆ..! ಅಂತ ಕೇಳದೇ ಹೋದ್ರೆ ಖಂಡಿತ..ಅವರಿಗೆ ಉಂಡ ಅನ್ನ ಜೀಣ೯ ಆಗೋದಿಲ್ಲ ಅಂತೀನಿ.
ಅಂದ ಹಾಗೆ ಈ ಪೋನ್ ನಲ್ಲಿ ಮಾತಾಡಿದ ಮಹಾಶಯ ಮದುವೆ ಆಗಿ ಎಂಟು ವಷ೯ ಆಯಿತು.ವಷ೯ದಲ್ಲಿ ಈ ಗಂಡ ಹೆಂಡತಿ ಆರೇಳು ಬಾರಿಯಾದ್ರು ಕಿತ್ತಾಡಿಕೊಂಡು, ಆ ತಾಯಿ ಅವರಪ್ಪಾಜಿ ಬಳಿ “ನನೆಗೆ ಡೈವೋರ್ಸ್ ಕೊಡಿಸಿ” ಅಂದಿರ್ತಾಳೆ,ಇವನು ನನಗೆ ಅದೇನ್ ಮಾಡ್ತಿಯೋ ಗೊತ್ತಿಲ್ಲ, ಬಿಡುಗಡೆ ಬೇಕು..ಅಂತ ಕೇಳ್ತಿರ್ತಾನೆ.ಆದ್ದರಿಂದ ಇವರ ಬಗ್ಗೆ ನಾನು ಅಷ್ಟೊಂದು ಸ್ಸೀರಿಯಸ್ ಆಗಿ ಯೊಚಿಸಲ್ಲ.ಆದ್ರೆ ಈ ಬಾರಿ ಕೊಂಚ ಡಿಪೆರೆಂಟ್ ವಾಯ್ಸ್ ನಲ್ಲಿ ಡೈವೋರ್ಸ್ ಕೇಳಿದ ನಿಮಿತ್ತ..ನಾನು ಒಂದಷ್ಟು ಆತಂಕದಿಂದಲೇ ಬೆಳಗಿನ ಪತ್ರಿಕೆಯನ್ನ ನೋಡಿದೆ, ಅಬ್ಭ ..ಯಾವ ಆತ್ಮ ಹತ್ಯಯ ಸುದ್ದಿ ಇಲ್ಲ. ನಂತರ ಮೊಬೈಲ್ ಆನ್ ಮಾಡಿದೆ. ಉಹುಂ..ಅಲ್ಲಿಯೂ ಯಾವ ಕೊನೆಯ ವಿದಾಯದ ಮೆಸೇಜ್ ಇರಲಿಲ್ಲ.ಆಗ ಸಮಾಧಾನವಾಗಿ ಎಂದಿನ ದಿನಚರಿಗೆ ಸಜ್ಜಾದೆ.
ಹೊಲದ ಬಯಲ ವಿಸರ್ಜನೆಗೆ ಕಾಲು ಮಡಚಿ ಕೂತ ಹೊತ್ತಲ್ಲಿ ಹಾಗೇ ಯೋಚಿಸುತ್ತ ಹೋದೆ.ಹೌದು ಎತ್ತ ಹೋಗುತ್ತಿದೆ ಸಂಬಂಧಗಳ ಆ ದಿವ್ಯ ಅನುಬಂಧ..?ಆಗಿನ ಅವಿದ್ಯಾವಂತ ಅವಿಭಕ್ತ ಕುಟುಂಬಗಳಿಗೂ,ಈ ಗಿನ ವಿದ್ಯಾವಂತ ವಿಭಕ್ತ ಕುಟುಂಬಕ್ಕೂ..ಅದೆಲ್ಲಿಂದೆಲ್ಲಿಯ ಸಂಬಂಧ? ದೊಡ್ಡಪ್ಪ..ಚಿಕ್ಕಪ್ಪ..ಮಾವ..ಅತ್ತೆ ಎಂದು ಕುಲವಲ್ಲದವರೂ ಊರೊಳಗೆ ಸಂಬಂಧದ ಬೆಸುಗೆ ಹೆಣೆದು ಸದ್ಭಾವನೆ ಬೆಳೆಸಿ,ಮದುವೆ-ಮುಂಜಿಗಳನ್ನ ಅವರೇ ನಿಂತು ಮಾಡುತ್ತಿದ್ದರು.ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಉಣ್ಣುವ,ಹಬ್ಬಕ್ಕೆ ಮನೆಯಲ್ಲಿ ಎಲ್ಲಾ ಮಕ್ಕಳಿಗೂ ಒಂದೇ ಬಟ್ಟೆ ಹೊಲಿಸಿ ಒಗ್ಗಟ್ಟು.,ಮತ್ತು ವಿಶ್ವಾಸವನ್ನು ಪ್ರತಿಬಿಂಬಿಸುವ ಕಲೆ ಹೊಂದಿದ್ದರು.ಮಗುವನ್ನು ಆಡಿಸಲು ಅಜ್ಜ..ಅಜ್ಜಿ.ಕಾಳು -ಕಡಿ ಹಸನುಗೊಳಿಸಲು ದೊಡ್ಡಮ್ಮ,ಚಿಕ್ಕಮ್ಮ ಅಡುಗೆ ಮಾಡಲು ಅಮ್ಮ.ಕಟ್ಟಿಗೆ ಹೊಡೆಯಲು ಚಿಕ್ಕಪ್ಪ,ಪೇಟೆ ಇಂದ ಸಂತೆ-ಸಾಮಾಗ್ರಿ ತರಲು ದೊಡ್ಡಪ್ಪ. ಹೊಲದ ವ್ಯವಸಾಯಕ್ಕೆ ಅಪ್ಪ… ಹೀಗೆ ಒಬ್ಬೊಬ್ಬರು ಒಂದೊಂದು ಜವಾಬ್ದಾರಿಯಲ್ಲಿ ಅದೆಷ್ಟು ಚಂದದ ಬದುಕನ್ನ ನಮ್ಮ ಕಣ್ಮುಂದೆ ಅವರು ಕಟ್ಟಿಕೊಟ್ಟಿದ್ದರು..? ಅವರೆಲ್ಲಾ ವಿಶ್ವಾಸದ ಸಂಬಂಧಗಳಿಗೆ ಹಾಗೂ ಪ್ರಾಮಾಣಿಕವಾದ ಜೀವನ ಪ್ರೀತಿಗೆ ಬದುಕಿದವರು. ಈಗಿನವರೋ ದುಡ್ಡಿಗೆ;ಅದರ ಬಡ್ಡಿಗೆ..ಬಡಿವಾರಕ್ಕೆ ಮೌಲ್ಯಗಳನ್ನೆಲ್ಲಾ ಮಣ್ಣು ಮಾಡಿ,ಸ್ವೇಚ್ಚೆಯ ಬದುಕ ಬಯಸಿ.ನೌಕರಿಯ ನೆಪವೊಡ್ಡಿ..ಕೃಷಿಯ ತೊರೆದು, ನಗರ ಸೇರಿ ನರಳುತ್ತಾ.. ಹೀಗೆ; ಅರೆ-ಬರೆ ಬುದ್ದಿವಂತರಂಥಹ ನಮ್ಮಂಥವರಿಗೆ ದೂರವಾಣಿ ಕರೆ ಮಾಡಿ ಡೈವೋರ್ಸ್ ಕೇಳದೇ ಏನು ಮಾಡುತ್ತಾರೆ..? ಹೌದು ಅವಿಭಕ್ತ ಕುಟುಂಬಗಳಲ್ಲಿ ಜಗಳ,ಮುನಿಸು ದುಃಖಗಳಿರುತ್ತಿರಲಿಲ್ಲ ಅಂತ ಅಲ್ಲ, ಅಲ್ಲಿ ಸಣ್ಣವರು ಮುನಿಸಿಕೊಂಡರೆ ದೊಡ್ಡವರು ತೆಕ್ಕೆಗೆ ಬಾಚಿಕೊಳ್ಳುತ್ತಿದ್ದರು.ದೊಡ್ಡವರು ಮುನಿದರೆ ಸಣ್ಣವರು ಕಾಲಿಡಿದುಕೊಳ್ಳುತ್ತಿದ್ದರು. ಹೀಗಿದ್ದಾಗ ಎಂಥಹ ಬಿರುಕುಗಳಿದ್ದರೂ ಸಂಬಂಧಗಳು ಗಟ್ಟಿ ನಿಲ್ಲುತ್ತಿದ್ದವು, ‘ಇಗೋ‘ ಎಂಬುದು ಇಂದಿನ ಗಂಡ-ಹೆಂಡತಿಯಲ್ಲಿ ಮನೆಯ ಯಜಮಾನನ ಸ್ಥಾನದಲ್ಲಿರುವ ನಿಮಿತ್ತ; ಅಲ್ಲಿ ಯಾರಿಗೂ ಪ್ರವೇಶ ಇರುವುದಿಲ್ಲ.ತಾವಾಯಿತು,ತಮ್ಮ ಮಕ್ಕಳಾಯಿತು.ಮಕ್ಕಳ ಸ್ಕೂಲ್,ಆಪೀಸ್, ಗಾಡಿ ಪೆಟ್ರೋಲ್ ಗೆ,ಹಾಲಿಗೆ ಗ್ಯಾಸ್ ಗೆ ಒಂದಷ್ಟು ಚೀಟಿಗೆ ಅಂತ ಬಂದ ಸಂಬಳ ಡಿವೈಡ್ ಮಾಡಿ,ಹೆಂಡತಿಗೆ ಒಂದಷ್ಟು ಸುಳ್ಳು ಖರ್ಚು ಗಂಡ ತೋರಿಸಿ,ಗಂಡನಿಗೂ ಹೆಂಡತಿ ಒಂದಷ್ಟು ಸುಳ್ಳು ಲೆಖ್ಖ ತೋರಿಸಿ,ಒಬ್ಬರಿಗೊಬ್ಬರು ಆದಶ೯ ದಂಪತಿಗಳಂತೆ, ತೊರೆದ ಸಂಬಂಧಗಳಿಗೆ ತೋರಿಕೆಯ ಮುಖವಾಡ ಧರಿಸಿ ಬದುಕುವವರಿಗೆ ನಿಜವಾದ ನೆಮ್ಮದಿ ಯಲ್ಲಿಯದು..? ಹಾಗಾಗಿ ವಿದ್ಯಾವಂತ..ಹಾಗೂ ನೌಕರಸ್ಥರ ಕುಟುಂಬಗಳಲ್ಲೇ ಈ ದಿನಗಳಲ್ಲಿ ಹೆಚ್ಚಾಗಿ ವಿಚ್ಛೇದನಗಳು ಜಾಸ್ತಿಯಾಗುತ್ತಿವೆ.
ಅಯ್ಯೋ..ಇಷ್ಟೊತ್ತು ಕಾಲು ಮಡಚಿ ಕುಳಿತಲ್ಲೇ ಹಿಂದಿನವರ ಹಾಗೂ ಇಂದಿನವರ ಕುರಿತು ಯೋಚಿಸಿದೆನೆಲ್ಲಾ..ಎಂದು ಎಲ್ಲಾ ತೊಳೆದುಕೊಂಡು ಮನೆಗೆ ಬಂದೆ. “ರೀ..ಯಾಕೋ ಮಾವ ಮೂರು ಸಾರಿ ಫೋನ್ ಮಾಡಿದ್ರು,ಇಷ್ಟೊತ್ತು ಎಲ್ಲಿ ಹೋಗಿದ್ರಿ,ಮೊಬೈಲ್ ಮನೇಲಿಟ್ಟು.” ಎಂದು ಗೊಣಗುತ್ತಾ..ಮೊಬೈಲ್,ಕಾಫಿ ನನ್ನ ಕೈಗಿಟ್ಟು ಹೋದಳು ನನ್ನ ಅಧಾ೯ಂಗಿ.ಮೂರು ಬಾರಿ ಪೋನ್ ಮಾಡಿದ್ದ ಮಹಾಶಯನಿಗೆ ನಾನು ಹಿಂದಿರುಗಿ ಕರೆ ಮಾಡಿದೆ. ಎನೋ ಪೋನ್ ಮಾಡಿದ್ದಂತೆ? ಏನ್ ಸಮಾಚಾರ! ಅಂದೆ.”ಅದೇ ಕಣೋ..ರಾತ್ರಿ ಪೋನ್ ಮಾಡಿದ್ದೆನಲ್ಲ? ಡೈವೋರ್ಸ್ ಕೊಡಿಸೋದರ ಬಗ್ಗೆ, ಪ್ಲೀಜ್ ನನಗೆ ನೆಮ್ಮದಿ ಬೇಕು ಏನ್ ಮಾಡ್ಲಿ..”? ಅಂದ. ನನಗಿಂತ ದೊಡ್ಡವನು,ಹೆಚ್ಚಿಗೆ ಓದಿ ನೌಕರಿ ಪಡೆದು,ಪಟ್ಟಣ ಸೇರಿ,ಇಷ್ಟ ಪಟ್ಟು ಮದುವೆ ಆಗಿ…ಈಗ ಏನ್ ಮಾಡ್ಲಿ..ಅಂತ ಕೇಳುವವನಿಗೆ ಏನ್ ಹೇಳಲಿ..? “ಸಹೋದರ ನಿನಗೆ ನನ್ನ ಮನೆ ಬಾಗಿಲು ಯಾವಾಗಲೂ ತೆಗೆದಿರುತ್ತೆ ಊರಿಗೆ ಬಾ..ಎಲ್ಲಾ ಸಂಬಂಧಗಳನ್ನ ಪುನಃ ಬೆಸೆಯೋಣ” ಎಂದು ಫೋನಿಟ್ಟು, ಒದ್ದೆಯಾದ ಕಣ್ಣೊರಸಿಕೊಳ್ಳುತ್ತಿದ್ದೆ “ರೀಯಾರದು ಪೋನ್..? ಯಾಕ್ ಕಣ್ಣೀರು..!” ಅಂತ ಕೇಳಿದ ನನ್ನವಳನ್ನ ನೋಡುತ್ತಾ..ನಿಂತು ಬಿಟ್ಟೆ..!
—–ನಾಗು,ತಳವಾರ್.
ನಿಮ್ಮದೊಂದು ಉತ್ತರ