ಹಸಿವೆಂದರೆ ಅಷ್ಟಿಷ್ಟಿಲ್ಲ.ನೀರು ಕುಡಿದು..ಕುಡಿದು,ಕುಡಿದ ನೀರೆಲ್ಲಾ ಬೆವರಾಗಿ ಬಸಿಯುತ್ತಿತ್ತು. ಕೈ- ಕಾಲು ನಡುಗುತ್ತಿದ್ದವು.ಜೋಬೊಳಗೆ ಬಿಡಿಗಾಸಿಲ್ಲ.ಗೆಳೆಯನ ಅಪಾಟ್೯ಮೆಂಟ್ ತಲುಪಲು ಇನ್ನೂ ನಲವತ್ತು ನಿಮಿಷ ನಡೆಯಬೇಕಿತ್ತು.ವಿಪರೀತ ಜನ ಜಂಗುಳಿಯ ಮಧ್ಯ ತಲೆ ತಗ್ಗಿಸಿಕೊಂಡು,ಪುಟ್ ಪಾತ್ ಮೇಲೆ ಭಾರವಾದ ಹೆಜ್ಜೆ ಕಿತ್ತಿಡುತ್ತಲೇ ಹಿಂದಿನ ದಿನ ನಡೆದ ಘಟನೆಗಳ ಮತ್ತೆ..ಮತ್ತೆ ನೆನಪಿಸಿಕೊಳ್ಳುತ್ತಾ ಸಾಗಿದೆ.
“ಲೇ ನನ್ನ ಮಾತು ಕೇಳು,ನಿನಗೀಗ ಇರೋದು ಒಂದೇ ದಾರಿ. ನಾವಾದ್ರೂ ಇಲ್ಲಿ ಬದುಕುಳಿಯಬೇಕು ಅಂದ್ರೆ;ನೀನು ಸತ್ತರೆ ಮಾತ್ರ ಸಾಧ್ಯ. ಸಾಲ ಕೊಟ್ಟವರು ಸುಮ್ಮನೇ ಬಿಡ್ತಾರೆ ಅಂದುಕೊಂಡೆಯಾ? ನಿನ್ನ ಸಲುವಾಗಿ ಮನೆಯವರನ್ನೆಲ್ಲಾ ಸಾಯಿಸಬೇಡ” ಹೀಗಂತ ಸ್ವಂತ ತಂದೆಯೇ ಸಾಯೋ ಸಲಹೆ ಕೊಟ್ಟಾಗ? ಎದೆಗೆ ಉಕ್ಕಿ ಬಂದ ದುಃಖವನ್ನ ಗೋಡೆಯಲ್ಲಿ ಚಿತ್ರವಾಗಿದ್ದ ಅವ್ವ ಮಾತ್ರ ಅರ್ಥಮಾಡಿಕೊಂಡಿರಬೇಕು.ನಾನು”ಹೂಂ” ಅಂತ ದೊಡ್ಡದೊಂದು ನಿಟ್ಟುಸಿರಾಕಿ;ನಡೋ ಪಡಸಾಲಿಗೆ ಹಳೆಯ ಲುಂಗಿ ಹಾಸಿ,ಒಂದಷ್ಟು ಪುಸ್ತಕ,ಬಟ್ಟೆ ಹಾಕಿ,ಮಡಿವಾಳರ ಗಂಟಂತೆ ಕಟ್ಟಿಕೊಂಡು ಊರು ಬಿಟ್ಟೆ. ಅನಾಮತ್ತು ಇಪ್ಪತ್ತೆಂಟು ಲಕ್ಷಕ್ಕೆ ಸಾಲಗಾರನಾಗಿ ಸಾಯಲು ನಿರ್ಧರಿಸಿದ ನನ್ನ ಕೊನೆಯ ಆಸೆ, ಬಡವಿ ಬಾಣಂತಿಯಾಗಿದ್ದ ನನ್ನ ಹೆಂಡತಿ ಮತ್ತುಮಗುವನ್ನ ನೋಡಿಕೊಂಡು ಬರುವುದಾಗಿತ್ತು.ಅಂತೆಯೇ ಮುಸ್ಸಂಜೆ ಹೆಂಡತಿ ಊರಿಗೆ ಬಸ್ಸೇರಿ ಹೊರಟೆ.
ಆಕೆಯ ಊರು ತಲುಪಿದಾಗ;ರಾತ್ರಿ ಹನ್ನೊಂದು ಅನ್ಸುತ್ತೆ. ಸಣ್ಣ ಮನೆ, ಮಳೆ ಬೇರೆ ಬರ್ತಿತ್ತು.ಬಾಗಿಲು ಬಡಿದೆ.ದೀಪ ಹಿಡಿದು ಹೆಂಡತಿಯ ತಮ್ಮ ಕದ ತೆರೆದ.ಅವ್ವ ಮಾವ ಬಂದಿದೆ ಅಂದ.ಕಾಲೊರಿಸಿಕೊಳ್ಳುವ ಜಾಗದಲ್ಲೇ ಹಾಸಿದ ಹಾಸಿಗೆಯನ್ನ ಅವರಮ್ಮ ಸುತ್ತುತ್ತಾ..”ಬಾ ತಮ್ಮ” ಎಂದು ಸೆರಗೊದ್ದು ಒಳಗೆಕರೆದರು.ಈಕೆ ಕಿವಿಗೆ ಹತ್ತಿ ಇಟ್ಟುಕೊಂಡು,ಹೋಳು ಮಗ್ಗಲು ಮಲಗಿ ನಿದ್ರೆ ಹೋಗಿದ್ದಳು. “ಪಾಪು ತುಂಬಾ ಅಳುತ್ತೆ ತಮ್ಮ..ತಾಯಿ ಮಗಳು ಈಗ ಮಲಗಿದ್ದಾರೆ ನೋಡು,ಪ್ರೇಮ..ಹೇ ಪ್ರೇಮ..ತಮ್ಮ ಬಂದಿದೆ ನೋಡು” ಅಂತ ಅವಳನ್ನ ಎಬ್ಬಿಸಿಯೇ ಬಿಟ್ಟರು. ಮುಲುಕುತ್ತಾ ಎದ್ದ ಪ್ರೇಮ; “ಏನ್ರೀ..ಇಷ್ಟೊತ್ತಲ್ಲಿ.? ಉಣ್ಣಕ್ಕಿಟ್ಟುಕೊಡ್ಲಾ..! ಈಗ ಬಂದ್ರಾ ಅಂತ ಎದ್ದು ಅಡುಗೆ ಕೋಣೆಗೆ ಕರ್ಕೊಂಡು ಹೋಗಿ ಕುಡಿಯೋಕೆ ನೀರು ಕೊಟ್ಟಳು.ನೀರು ಕುಡಿದು ಅಲ್ಲೇ ಕುಳಿತೆ.ಇವಳು ಪಾಪು ಎತ್ತಿಕೊಂಡು ಮತ್ತೆ ಒಳ ಬಂದಳು.ದೀಪದ ಬೆಳಕಲ್ಲಿ ಮಗಳ ಮುಖ ತೋರಿಸಿ.ಎಲ್ಲ ನಿಮ್ಮಂಗ ಐತಿ ನೋಡ್ರಿ.ಅಯ್ಯನೋರು ಅದ್ರುಷ್ಟವಂತಳು ಅಂತ ಹೇಳ್ಯಾರ ಅಂತ ಮಗಳನ್ನ ನನ್ನ ತೊಡೆಯ ಮೇಲೆ ಹಾಕಿದಳು.ಕತ್ತಲಲ್ಲಿ ನನ್ನ ಕಣ್ಣ ಹನಿ ಪಾಪುವಿನ ಕೆನ್ನೆಯ ಮೇಲೆ ಬಿತ್ತೋ..ಏನೋ? ಅದಕ್ಕೆ ಎಚ್ಚರವಾಗಿ ಅಳಲು ಪ್ರಾರಂಭಿಸಿತು. ಅವಳು ಪುನಹ ಎತ್ತಿಕೊಂಡು ಮೊಲೆಗೆ ಹಾಕಿಕೊಂಡಳು. “ಯಾಕ್ರಿ ಪೋನ್ ಕೂಡ ಮಾಡದಂಗೆ ಬಂದ್ರಿ..? ನಿನ್ನೆ ಇಂದ ನಿಮ್ಮ ಮೊಬೈಲ್ ಸ್ವಿಚ್ ಆಫ್ ಬೇರೆ ಇದೆ.ಏನ್ ಸಮಚಾರ..? ಯಾಕ್ ಒಂದು ಥರಾ..ಇದ್ದೀರಲ್ಲಾ? ಅವಳ ಪ್ರಶ್ನೆಗಳಿಗೆ ನನ್ನಲ್ಲಿಉತ್ತರವೇ ಇರಲಿಲ್ಲ.
ಅವರಮ್ಮ ಹಾಗೂ ಈಕೆಯ ತಮ್ಮ ಹಾಸಿಗೆ ಸುತ್ತಿಕೊಂಡು ಎದುರು ಮನೆಯ ಹೆಂಚಿನ ಕಟ್ಟೆಯ ಮೇಲೆ ಮಲಗಲು ಹೋಗಲು ಅನುವಾಗಿ,”ಪ್ರೇಮ ಕದ ಹಾಕಿಕೋ..ಪಾಪು ಅತ್ತರೆ ಕರಿ” ಅಂತ ಅವರಮ್ಮ ಹೇಳೋದನ್ನೇ ಕಾಯಿತ್ತಿದ್ದವನು ಒಮ್ಮೆಲೇ ಅವಳನ್ನ ಅಮ್ಮನಂತೆ ತಬ್ಬಿ ಅತ್ತು ಬಿಟ್ಟೆ.ಅವಳು ಯಾಕ್ರೀ..ಏನಾಯಿತು..ಅಂತ ಕಣ್ಣೀರು ಒರೆಸುತ್ತಲೇ ಸಂಕಟ ಪಟ್ಟುಕೊಂಡೇ ನನ್ನ ಸಮಾಧಾನ ಪಡಿಸುತ್ತಿದ್ದಳು.
ಪ್ರೇಮ ಬಳ್ಳಾರಿಯ ದೊಡ್ಡ ರಾಜಕಾರಣಿಯ ಪಿ.ಎ.ಒಬ್ಬನಿಗೆ ಲಿಕ್ಕರ್ ಮಾಡಿಸಿಕೊಡಲು ಇಪ್ಪತ್ತೆಂಟು ಲಕ್ಷ ಹಣ ಕೊಟ್ಟಿದ್ದೆ,ಎಲ್ಲವೂ ಸಾಲ ರೂಪದಲ್ಲೇ ತಂದ್ದದ್ದು.ಆತ ಮೊನ್ನೆ ದಿನ ಹಾಟ್೯ ಅಟ್ಯಾಕ್ ಆಗಿ ಸತ್ತಿದ್ದಾನೆ.ಹಣ ಕೊಟ್ಟಿದ್ದಕ್ಕೆ ನನ್ನಲ್ಲಿ ಏನೂ ಸಾಕ್ಷಿ ಇಲ್ಲ. ಈಗ ಲೈಸನ್ಸೂ ಇಲ್ಲ,ಹಣನೂ ಇಲ್ಲ.ಸಾಲ ಗಾರರಿಗೆ ಹಣ ಮುಟ್ಟಿಸೋದು ಹೇಗೆ..? ನನ್ನ ಮನೆ..ಹೊಲ ಮಾರಿದರೂ ಸಾಲ ತೀರೋದಿಲ್ಲ. ನಿಜಕ್ಕೂ ತುಂಬಾ ಸಂಕಟವಾಗಿ ನಿನ್ನಲ್ಲಿ ಅಳುವ ಸಲುವಾಗಿ ಬಂದೆ, ಅಂದಾಗ; ಅವಳು ನನ್ನ ಕೈ ಹಿಡಿದುಕೊಂಡು ಗುಬ್ಬಿ ಮರಿಯಂತಾಗಿಬಿಟ್ಟಳು.
ಬಿಡಿ ದೇವರಿದ್ದಾನೆ, ಭಿಕ್ಷೆ ಬೇಡಿಯಾದ್ರು ಬದುಕೋಣ.ಸಾಯೋ ಮಾತೇಕೆ..? ನಾವೇನೂ ಕುಂಟ್ರಾ..ಕುರುಡರಾ…ಜೀವನ ಪೂರ್ತಿ ಸಾಲಕ್ಕೋಸ್ಕರ ದುಡಿಯೋಣ ಬಿಡಿ.ನಮಗೆ ಸೋಲು ಬಂದಾಗ ಸಂಬಂಧ ಸ್ನೇಹಗಳು, ನಮ್ಮನ್ನು ಅವಮಾನಿಸಿ ಗಟ್ಟಿಗೊಳಿಸುತ್ತವೆ ಎಂದು ತಿಳಿದುಕೊಳ್ಳಬೇಕೋ ವಿನಃ, ಅಪ್ಪ ಹೀಗಂದ.ಅಣ್ಣ ಹೀಗಂದ..ನನ್ನ ಜೊತೆಗಾರರೇ ಹೀಗಂದರು ಅಂತ ನಾವು ಯಾವತ್ತೂ ಯೋಚಿಸಬಾರದು ರೀ..! ಬಡತನ ನನಗೆ ಬದುಕುವುದ ಕಲಿಸಿ ಕೊಟ್ಟಿದೆ. ನೀವು ಏನು ಅಂತ ನನಗೆ ಗೊತ್ತು, ಜನ್ಮ ಕೊಟ್ಟವರಿಗೆ ನೀವು ಅಥ೯ ಆಗಿರಲಿಕ್ಕಿಲ್ಲ.ದೇಹ ಕೊಟ್ಟವಳಿಗೆ ಅಥ೯ ಆಗಿದ್ದೀರಿ.ಎಲ್ಲರೂ ಒಂದು ದಿನ ಸಾಯಲೇ ಬೇಕು, ಅಂದಾಗ ನಾವೇ ನಾವೇಕೆ ಸಾಯೋದು? ಬಿಡಿ ಸಾವು ತಾನಾಗೇ ಬರೋವರೆಗೂ ಬದುಕಿರೋಣ.ಬಹಳ ಅಂದ್ರೆ ಏನ್ ಆಗುತ್ತೆ? ಹೊಲ..ಮನಿ ಹೋಗುತ್ತೆ. ಸಂಬಂಧಿಗಳಿಗೆ ಇವರಂಗೆ ಯಾರೂ ಹುಂಬತನಕ್ಕೆ ಹೋಗಬಾರ್ದು ಅನ್ನೋದಕ್ಕೆ ಉದಾಹರಣೆ ಆಗುತ್ತೆ ಅಷ್ಟೇ ತಾನೆ..? ಬಿಡಿ ಹೊಸ ಸಂಬಂಧ,,ಹೊಸ ಸ್ನೇಹ..ಹೊಸ ಬದುಕನ್ನ ಕಟ್ಟಿಕೊಳ್ಳೋದನ್ನ ನಿಮ್ಗೆ ನಾನು ಹೇಳಿಕೊಡಬೇಕಾ? ಬಡತನದ ಬೇಗೆಯಲ್ಲಿ,ಮೂಡರ ಕುಟುಂಬದಲ್ಲಿನನ್ನ ದೇವದಾಸಿ ಬಿಡುವ ಸಂದರ್ಭದಲ್ಲಿ ಬಾಳು ಕೊಟ್ಟು ಕೈ ಹಿಡಿದ ನೀವು ಸಾಯೋದಾ? ಅವ್ರಿವರ ಮನೆಯ ಕಸ..ಮುಸುರೆ ಮಾಡಿ ಮಕ್ಕಳನ್ನ ನಿಮ್ಮನ್ನ ಸಾಕ್ತೀನಿ.,ಹೆದರ ಬೇಡಿ. ಸಾಯೋಕೆ ಇರೋ ಧೈರ್ಯದಲ್ಲಿ ಒಂದು ಭಾಗ ಧರ್ಯ ಸಾಕು ಬದುಕೋಕೆ.ಅವಳು ಹೇಳ್ತಾ ಹೋಗುತ್ತಿದ್ದಂತೆ ನನ್ನ ಮೈ ಕೂದಲುಗಳು ನೆಟ್ಟಗಾಗುತ್ತಿದ್ದವು.ನನ್ನವ್ವಳೇ ಇವಳಲ್ಲಿದ್ದಾಳಾ..ಈಗ? ಅಂತ ಅನ್ನಿಸಿದ್ದು ಮಾತ್ರ ಸುಳ್ಳಲ್ಲ.ಅಷ್ಟೊತ್ತಲ್ಲೇ ಗೆಳೆಯನೊಬ್ಬನಿಗೆ ಮೊಬೈಲ್ ಆನ್ ಮಾಡಿ ಕರೆ ಮಾಡಿದೆ, ಆ ಕಡೆ ಇಂದ “ಏನೋ ಇಷ್ಟೊತ್ತಿನಲ್ಲಿ? ಹತ್ತು ನಿಮಿಷದಲ್ಲಿ ಬಿಕ್ಕುತ್ತಾ ನನ್ನೆಲ್ಲಾ ಕತೆ ಹೇಳಿ ಮುಗಿಸಿದೆ.”ತಂದೆ ನಿನ್ನ ಕತಿ ಕನ್ನಡದ ಹಳೇ ಸಿನಿಮಾ ಇದ್ದಂಗೆ ಇದೆ, ನನ್ನಿಂದ ಈಗ್ ಏನ್ ಆಗಬೇಕು ಹೇಳು” ಅಂದ.ಯಾಕೋ..ಮನಸ್ಸು ಚುಚ್ಚಿದಂಗೆ ಆಗಿ ಪೋನ್ ಕಟ್ ಮಾಡಿದೆ. ಮತ್ತೆ ಅವನೇ ಪೋನ್ ಮಾಡಿದ.”ಹೇಳಲೇ ಸೂಳೇ ಮಗಂದು ನೆಟ್ವರ್ಕ್ ಸರಿ ಇಲ್ಲ.ಬೊಗಳು ಎನಾ ಹೇಳ್ತಿದ್ದೆಲ್ಲಾ?” ಅಂದ.”ಏನಿಲ್ಲ ಬಿಡು” ಅನ್ನೋದ್ರೊಳಗೆ..”ಲೇ ಸುದೀಪ್ ತರ ನೆಗಡಿ ಬಂದೋರಂಗೆ ಮಾತಾಡ್ಬೇಡ, ಈಗೇನ್ ತಾವು ಇಪ್ಪತ್ತೆಂಟು ಲಕ್ಷ ಸಾಲ ಮಾಡಿಕೊಂಡೀರಿ. ಸೋ..ತಾವು ಊರು ಬಿಡ್ತಿದ್ದಿರಿ..ತಮಗೊಂದು ಕೆಲ್ಸ ಬೇಕು? ಬೋಳೀ ಮಗನೇ ಹಡಗಲಿ ಯಲ್ಲಿದ್ದ ಪೆಟ್ರೋಲ್ ಬಂಕ್ ನ ಅಪ್ಪ ಸತ್ತಮೇಲೆ ಮಾರಿ ಅಕೌಂಟ್ ನಲ್ಲಿ ಇಪ್ಪತೈದು ಲಕ್ಷ ಹಂಗೆ ಇಟ್ಟೀನಿ.ನಾಳೆ ಬೆಂಗಳೂರಿಗೆ ಬಾ ಒಂದು ರೌಂಡು ಎಣ್ಣೆ ಹೊಡುಕೊಂಡು ಚೆಕ್ ..ಇಸ್ಕೊಂಡು ಹೋಗುವಂತಿ. ಲೇ ಬರೋವಾಗ ರೊಟ್ಟಿ,ಕಡ್ಲಿ ಪುಡಿ ತಗೊಂಡು ಬಾ..ಅಂದಾಗ..! ನಾನು ಪೋನ್ ಇಟ್ಟು ಬಿಕ್ಕಳಿಸುತ್ತಿದ್ದರೆ;ನನ್ನ ಹೆಂಡತಿ ರೊಟ್ಟಿ ಸುಡಲು ಕೊಣಗೆ ಕೆಳಗೆ ಇಳಿಸಿ ಕೊಂಡಿದ್ದಳು.
ಜೋಬಲ್ಲಿದ್ದ ಮೊಬೈಲ್ ರಿಂಗಾಯಿತು. ಹಲೋ,,,”ಲೇ ಯಲ್ಲದಿ..ಹೊಟ್ಟೆ ಹಸಿದು ಸಯಾಕತ್ತಿನಿ..ನಿನ್ನ ರೊಟ್ಟಿ ನಂಬಿ,.ಮಗನೇ ಬಂದೆ-ಬಂದೆ ಅಂತಿಯಾ? “ಬಂದೆಲೇ,,ಇನ್ನೆರೆಡು ನಿಮಿಷ ನಿನ್ನ ಅಪಾಟ್೯ಮೆಂಟ್ ಬಂತು.
-ನಾಗು,ತಳವಾರ್
ನಿಮ್ಮದೊಂದು ಉತ್ತರ