ನನ್ನೊಳಗಿನ ನಾನು ಕಳೆದು ಹೋಗುತ್ತಿರುವುದು ಪ್ರಾಯಶಃ ನಿನ್ನ ಮೌನದಿಂದಲೇ ಇರಬೇಕು. ಅವತ್ತು ಇದ್ದಕ್ಕಿದ್ದಂತೆ ಎದ್ದು ಹೋದೆಯಲ್ಲ; ಹೋದದ್ದಾದರೂ ಎಲ್ಲಿಗೆ..? ನಲ್ಲನನ್ನು ಒಲ್ಲೆ ಅನ್ನದೇ ಮೌನದಾ ಹಾದಿ ತುಳಿದು ಮನೆಯವರು ಒಪ್ಪಿದ್ದ ಅಚ್ಚುಕಟ್ಟಾದ ಆತನ ಬದುಕಿನೊಳಕ್ಕೆ ಕಾಲಿಟ್ಟೆಯಂತೆಲ್ಲ..? ನನ್ನಲ್ಲೇ ಬಿಟ್ಟು ಹೋಗಿರುವ ನಿನ್ನ ಕಣ್ಣ ಕಂಬನಿ, ದ್ವಂದ್ವ ಸ್ಥಿತಿ, ಅಪಕ್ವ ನಿಧಾ೯ರ, ನಿನ್ನ ಅಸಹಾಯಕತೆಯನ್ನ ಅದೆಲ್ಲಿ ಹೂತಿಡಲಿ…?
ನನ್ನ ಖಿನ್ನತೆ ಇರುವುದು, ನೀ ಹೋದುದಕ್ಕಲ್ಲ, ಹೋಗುವ ಆ ಅರೆ ಘಳಿಗೆಯಲ್ಲಿ ಅಷ್ಟೊಂದು ದುಗುಡದ ದುಃಖವನ್ನ ಅದ್ಯಾವ ಮುಟುಗೆಯಲ್ಲಿ ಹಿಡಿದಿಟ್ಟು ಕೊಂಡು,ನಿನ್ನ ಎದೆಯೊಳಗಿನ ಆರ್ತನಾದದ ಆಕ್ರಂದನಕ್ಕೆ ಸಾಂತ್ವಾನದ ಹಾಲುಣಿಸಿದ ಬಗೆ ಯಾದರೂ ಹೇಗೆ…? ಎಂಬುದರ ಬಗ್ಗೆ.
ತಪ್ಪು ನಿನ್ನ ಮನಸ್ಥಿತಿಯದಾ..ಪರಿಸ್ಥಿಯದಾ..? ಅದು ನನಗೆ ಬೇಡವಾಗಿದೆ. ಮೊದಲು ಅಲ್ಲಿ ನೀ ಹೇಗಿದ್ದೀಯ ಹೇಳಿಬಿಡು, ನಿನ್ನ ಬದುಕಿನ ಚೌಕಟ್ಟಿನಲ್ಲಿ ನೀನು ಚಂದಗಿದ್ದರೆ ಸಾಕು ಜೀವವೇ…! “ಬಿಟ್ಟು ಬಂದ ನನ್ನ ನಲ್ಲನ ನಿಟ್ಟುಸಿರು….ನನ್ನನ್ನ ಸುಮ್ಮನೇ ಬಿಟ್ಟೀತೇ..” ಎಂಬ ದಿಗಿಲು ಖಂಡಿತಾ ನಿನಗೆ ಬೇಡ. ಅಷ್ಟೊಂದು ಪ್ರೀತಿಸುತ್ತಿದ್ದ ನನ್ನವ್ವ ಕೂಡ ಒಮ್ಮೆ ಇದ್ದಕ್ಕಿದ್ದಂತೆ ಏನನ್ನೂ ಹೇಳದೇ ಜಗತ್ತೇ ಬಿಟ್ಟು ಹೋದಳು; ನನ್ನನ್ನು ತಬ್ಬಲಿಮಾಡಿ. ಅವತ್ತಿನ ಯಾತನೆಗೂ ಇವತ್ತಿನದಕ್ಕೂ ಯಾವುದೇ ವ್ಯತ್ಯಾಸ ನನಗೆ ಕಾಣುತ್ತಿಲ್ಲವಾದ್ದರಿಂದ, ನೀನು ಆತಂಕ ಪಟ್ಟರೆ ಅದಕ್ಕೆ ಅರ್ಥ ಇರುವುದಿಲ್ಲ.
ಬದುಕಿನ ಮೌಲ್ಯಗಳನ್ನರಿತ ಮತ್ತು ಮತ್ತೊಬ್ಬರಿಗೆ ಜೀವನೋತ್ಸಾಹ ತುಂಬುವ ಜೀವಿಯಾದ ನಿನಗೆ ಮೋಸಗೊತ್ತಿಲ್ಲವೆಂದು ನನಗೆ ಗೊತ್ತಿದೆ. ನಿನ್ನ ತುಂಬು ಕುಟುಂಬದ ಒಕ್ಕೊರಿಲಿನ ಒಪ್ಪಂದಕ್ಕೆ ಮಣಿದು ಅವರ ಮನಸ್ಸನ್ನ ಘಾಸಿಗೊಳಿಸಲು ಇಚ್ಛಿಸದೇ ನೀ ಈ ಮದುವೆಗೆ ಒಪ್ಪಿರುವೆ ಎಂಬ ಅಭಿಪ್ರಾಯ ನನ್ನದಾಗಿದೆ. ಬಿಡು ಯಾತನೆ ಎಂಬುದು ಯಾರನ್ನು ಬಿಟ್ಟಿದೆ..? ಒಂದಿಲ್ಲ ಒಂದು ಪಾತ್ರದಲ್ಲಿ ಅದು ಪ್ರತಿಯೊಬ್ಬರನ್ನೂ ಕಾಡುತ್ತಲೇ ಇರುತ್ತದೆ. ಆದರೆ ನನ್ನ ಪಾಲಿಗೆ ಇದು ಕಾಡುವ ಪರಿ ಇದೆಯಲ್ಲಾ…? ನಿಜಕ್ಕೂ ನನ್ನ ಶತೃವಿಗೂ ಬೇಡ. ಅವ್ವ ನನ್ನ ಬಿಟ್ಟು ಹೋದಾಗಿನಿಂದ ಅಪ್ಪ ದೂರದೂರಿನಲ್ಲಿರುವ ಅಣ್ಣನ ಮನೆಗೆ ಹೋಗಿಬಿಟ್ಟ. ಅಕ್ಕಂದಿರು ಗಂಡನ ಮನೆಯಲ್ಲಿ ತಣ್ಣಗಿದ್ದಾರೆ. ನಿನಗಾಗಿ ಜಾತಿ, ಸಮಾಜವನ್ನೇ ಮೊದಲೇ ಧಿಕ್ಕರಿಸಿದ್ದೆ. ನನ್ನ ಪಾಲಿಗೆ ಉಳಿದಿದ್ದು ಅವ್ವಳ ನೆನಪು ಮತ್ತುನೀನು ಮಾತ್ರ. ಈಗ ನೀನೂ ಆಟ ಮುಗಿಯಿತೆಂಬತೆ ಹೊರಟು ಹೋಗಿಬಿಟ್ಟೆ. ಹುಬ್ಬೆಗರಿಸಿ ಪ್ರೆಶ್ನೆ ಕೇಳುವ ಸಮಾಜಕ್ಕೆ; ನನ್ನಲ್ಲಿ ಉತ್ತರ ಇದೆಯಾದರೂ..ಎಲ್ಲಿ? ಮನೆಯ ಕೋಣೆಯ ಹೊಕ್ಕು ತೀರ ಕುಬ್ಜನಾಗಿದ್ದೇನೆ. ಹಾಗೆಯೇ ಬಿಕ್ಕಳಿಸುತ್ತಾ ಗೋಡೆಗೊರಗಿ ಕುಳಿತು ಅವ್ವಳ ಭಾವ ಚಿತ್ರ ನೋಡುತ್ತಿದ್ದೇನೆ, ಯಾರೂ ಇಲ್ಲದ ಅನಾಥನಾಗಿ. ತುಂಬಾ ಅಳು ಬರುತ್ತಿದೆ..ಅತ್ತು ಹಗುರಾಗಲು ಯಾರ ಹೆಗಲೂ ಆಸರೆಇಲ್ಲ ಅಂದಮೇಲೆ ನಾನು ಅವ್ವಳ ಮತ್ತು ನಿನ್ನ ನೆನಪುಗಳೊಡನೆ ಈ ಜಗತ್ತಿನ ಪಾಲಿಗೆ ಇನ್ನಿಲ್ಲವಾಗಬಯಸುತ್ತೇನೆ ಮತ್ತು ನಿನ್ನ ಒಡಲ ಬಸಿರಾಗಿ ಮತ್ತೆ ಹೊರಬರಲು ತವಕಿಸುತ್ತೇನೆ…!
ಇಂತಿ,
-ನಾಗು,ತಳವಾರ್.
ನಿನ್ನ ಒಡಲ ಬಸಿರಾಗಿ ಮತ್ತೆ ಹೊರ ಬರಲು ತವಕಿಸುತ್ತೇನೆ…..!
23 02 2009ಟಿಪ್ಪಣಿಗಳು : 7 Comments »
ವಿಭಾಗಗಳು : Uncategorized
ಮುನಿದ ಮನದೊಳಗಿನ ಸಾಲು..!
30 01 2009ಅರ್ಥವಿಲ್ಲದಾ
ಜೀವನ ವ್ಯರ್ಥ ಎಂದು ಕೇಳಿ
ಅರ್ಥ ಹುಡುಕಲು ಹೊರಟು
ಜೀವನದ ಅರ್ಧ ಆಯುಷ್ಯವನ್ನೇ
ಕಳೆದುಬಿಟ್ಟೆ.
*************
ನನ್ನದಲ್ಲದಾ ತಪ್ಪಿಗೆ,
ನೀ ಪ್ರೀತಿಸುತ್ತಿಲ್ಲ ಏಕೆ ತೆಪ್ಪಗೆ?
ನಾ ಕಪ್ಪಗಿರುದು
ನನ್ನ ತಪ್ಪಲ್ಲ
ನನ್ನ ಅಪ್ಪನದು.
***************
ಇದಾ..ಬದುಕು..!
ಮೊದಲೇ ಗೊತ್ತಿದ್ದರೆ
ತಾಯಿಯ ಹೊಟ್ಟೆಯಲ್ಲೇ
ತಣ್ಣಗಿರಬಹುದಿತ್ತಲ್ಲ?
*********
ಕಲ್ಲು ಸಣ್ಣದಿದ್ರೂ ಕಣ್ಣಾಗ ಬಿದ್ರ
ಅದ್ರ ನೋವು ಎಂಥಹದ್ದೇಳು?
ನೀ ಒಲ್ಲೆ ಎಂದು ಹೊರಟು ಹೋದ್ರ
ನನ್ನದೆಂಥಹ ಗೋಳು ಹೇಳು..?
**********
ಟಿಪ್ಪಣಿಗಳು : 4 Comments »
ವಿಭಾಗಗಳು : Uncategorized
ಅವ್ವಗೂ..ಒಂದು ಶಾಯಿರಿ…!
13 01 2009ಅದೋನೋ..ಭಯ, ದಿಗಿಲು
ಆತಂಕ..
ಸತ್ತುಹೋಗುತ್ತೇನೆಂದಲ್ಲ
ಇಲ್ಲಿ ಇನ್ನೂ ಬದುಕಬೇಕಲ್ಲ? ಎಂದು.
ಅದೇನೋ..ಕಣ್ಣೆಲ್ಲಾ ಮಂಜು-ಮಂಜು
ಉರಿ,ಉರಿ
ಯಾವುದೋ ಬೇನೆಯಿಂದಲ್ಲ,
ಇಲ್ಲಿ ನೀನಿಲ್ಲವಲ್ಲ ಎಂದು..!
ನಾಗು,ತಳವಾರ್.
ಟಿಪ್ಪಣಿಗಳು : 11 Comments »
ವಿಭಾಗಗಳು : Uncategorized