ಐದು ವರ್ಷಗಳ ಹಿಂದೆ ಇದೇ ಬಸ್ ನಿಲ್ದಾಣದಲ್ಲಿ ಅವಳಿಗಿಗಾಗಿ, ಕೇವಲ ಅವಳ ಬರುವಿಕೆಗಾಗಿ ನಿರೀಕ್ಷಿಸುತ್ತಿದ್ದನಾನು; ಅವಳು ಬರುವವರೆಗೂ ಅಲ್ಲಿಯೇ ಕುಳಿತು ಭಿಕ್ಷೆ ಬೇಡುತಿದ್ದ ಮುದುಕಿಯ ಮುಖದ ಮೇಲಿನ ಸುಕ್ಕುಗಟ್ಟಿದ ರೇಖೆಯನ್ನೇ ನೋಡುತ್ತಾ ಕುಳಿತಿದ್ದೆ.ಅಡ್ಡಬಂದ ಬಟಾಣಿ ಮಾರುವ ಹುಡುಗ ಹಿಂದೆ ಹರಿದಿದ್ದ ಚಡ್ಡಿಯನ್ನು ಮೇಲೆಕ್ಕೇರಿಸಿಕೊಳ್ಳುತ್ತಾ “ಟೈಮೆಷ್ಟಾಗಿದೆಸಾರ್” ಎಂದಾಗಲೂ ಮೂಕವಿಸ್ಮಿತನಾಗಿ ನಿಂತಿದ್ದೆ. ಹಾಗೆ ನಿಂತಿದ್ದಾಗಲೇ ಇವನೆಲ್ಲೋ ಮಾತು ಬಾರದ ಮೂಕನಿರಬೇಕು ಎಂಬಂತೆ ನೋಡಿ ಹೊರಟು ಹೊದ.
ಆಗ ನಿಜಕ್ಕೂ ಮಾತೆಲ್ಲ ಸತ್ತಂತಾಗಿ ಮೌನವೊಂದೇ ತನ್ನ ಸಾಂಮ್ರಾಜ್ಯವಾಳುತ್ತಿತ್ತು. ಹಣೆಯ ಮೇಲೆಲ್ಲಾ ಪದೇ ಪದೇ ಬೆವರ ಹನಿ ಸಾಲಿಕ್ಕುತ್ತಿದ್ದವು.ಕುಳಿತಲ್ಲಿ ಕೂಡಲಾಗುತ್ತಿರಲಿಲ್ಲ. ಕೈಯಲ್ಲಿಡಿದಿದ್ದ ದಿನ ಪತ್ರಿಕೆಯೇ ಭಾರವಾಗಿತ್ತು.ದೇಹವೆಂಬುದು ಮನಸನ್ನ ಹೊತ್ತುತಿರುಗುತ್ತದೆ.ಮನಸ್ಸು ಭಾರವಾದಾಗ ದೇಹ ನಿಸ್ತೇಜ ಹೊಂದುತ್ತದಂತೆ.
ಈಗ ನನ್ನ ದೇಹವೇಕೆ ನಿಸ್ತೇಜ ಹೊಂದಿದೆ? ಎಂದು ನನ್ನ ಮನಸ್ಸನ್ನ ಕೇಳಿಕೊಂಡಾಗ ಅರಿವಿಗೆ ಬಂದಿತ್ತು ಇಂದು ನಮ್ಮಿಬ್ಬರ ಅಗಲುವಿಕೆಯ ದಿನ. ಆರು ವರ್ಷಗಳಿಂದ ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿದ್ದೆಲ್ಲಾ ಸುಳ್ಳೆಂದು ಹೇಳುವ ದಿನ ಹಾಗೂ ಎಷ್ಟೇ ದುಃಖವಿದ್ದರೂ ನಗೆಯ ಮುಖವಾಡ ಧರಿಸಿ ವಿದಾಯ ಹೇಳುವ ದಿನವಾದ್ದರಿಂದ ನನ್ನ್ನ ಮನಸ್ಸು ದಿಕ್ಕು ತಪ್ಪಿದ ನಾವೆಯಂತೆ, ಕೊಡೆ ಕಂಡು ಬೆದರುವ ಹೋರಿಯಂತೆ,ನೀರಿನಿಂದ ಹೊರಬಿದ್ದ ಮೀನಿನಂತೆ, ಹೆಣ್ಣು ದೇವರ ಗುಡಿಯ ಮುಂದೆ ದೆವ್ವಬಂದವನು ಸುತ್ತವ ಹಾಗೆ ಬಸ್ ನಿಲ್ದಾಣದ ತುಂಬೆಲ್ಲಾ ಸುತ್ತಾಡಿದ್ದೇ ಸುತ್ತಾಡಿದ್ದು. ಸುತ್ತಾಡಿ ಸುಸ್ತಾಗಿ ತುಸುಹೊತ್ತು ಮತ್ತೆ ಕುಳಿತುಕೊಳ್ಳಲು ಸ್ಥಳ ನೋಡುತ್ತಿಂತೆ ಬಂದಿದ್ದಳು ಅವಳು.
ಬಂದ ತಕ್ಷಣ “ಹೇಗಿದ್ದೀಯ” ಅನ್ನಲಿಲ್ಲ. ಬಂದು ಬಹಳ ಹೊತ್ತಾಯ್ತಾ…? ಅನ್ನಲಿಲ್ಲ. ಕಣ್ಣಲ್ಲೇ ಸನ್ನೆಮಾಡಿ ಹೋಟಲೊಂದಕ್ಕೆ ಕರೆದೊಯ್ದು ಸಕ್ಕರೆ ಇಲ್ಲದ ಚಹಾಕ್ಕೆ ಆರ್ಡ್ರರ್ ಮಾಡಿದ್ದಳು. ಯಾಕೆಂದು ನಾನೂ ಕೇಳಲಿಲ್ಲ. ಇಂದಿನಿಂದ ಸಕ್ಕರೆರಹಿತ ಚಹಾ ಕುಡಿಯೋಣ ಎಂಬಂತಿತ್ತು ಅವಳ ಆ ಮೌನ. ಆವರಿಸಿಕೊಂಡಿದ್ದ ಮೌನವನ್ನ ಮುರಿಯುವ ತಾಕತ್ತು ನನ್ನಲ್ಲಿರಲಿಲ್ಲ.
ದುಃಖಕ್ಕಿಂತ ಮೌನ ಏನು ಮಹಾ..? ಮೌನದಾ ಕೋಟೆಯನ್ನು ಸೀಳಿ ಕಣ್ಣೀರಿನ ಮೂಲಕ ಹೊರಗೆ ಬಂದಿತ್ತು ಅವಳ ದುಃಖ. ಅವಳ ದುಃಖಭರಿತ ಕಣ್ಣೀರಿನ ಕಣ್ಣನ್ನು ನೋಡಿದಾಕ್ಷಣ ನನಗೇ ಗೊತ್ತಿಲ್ಲದೆ ನನ್ನೊಳಿಗಿನ ನಾನು ಬಿಕ್ಕಳಿಸತೊಡಗಿದೆ. ಜೇಬಿನಲ್ಲಿದ್ದ ಕರವಸ್ತ್ರ ಕಣ್ಣಲ್ಲಿ ನೀರು ಬರುತ್ತಲಿದೆ ಎಂದು ಎಚ್ಚರಿಸಿ
ದಾಗಲೇ ವಾಸ್ತವಕ್ಕೆ ಬಂದು ಮುಂದಿದ್ದ ಚಹಾದ ಕಪ್ಪನ್ನು ಅವಳ ಕೈಗೆ ತಗುಲಿಸಿದೆ, “ಹಾಂ” ಅಂದಳು.
ಕೆನ್ನೆಯ ಮೇಲಿನ ಕಣ್ಣೀರನ್ನು ತುದಿಬೆರಳಲ್ಲೇ ಸವರಿಕೊಳ್ಳುತ್ತಾ ತನ್ನ ಜಂಭದ ಚೀಲದಿಂದ ನಾ ಅವಳಿಗೆ ಬರೆದಿದ್ದ ಪ್ರೇಮ ಪತ್ರಗಳನ್ನೆಲ್ಲಾನನ್ನ ಮುಂದೆ ಹೊರತೆಗೆದು ಗುಡ್ಡೆ ಹಾಕಿದ್ದಳು. ಎಂದೋ ನಾ ಬರೆದು ಮರೆತಿದ್ದ ಕವಿತೆಗಳನ್ನು ನನ್ನ ಕೈಗಿಟ್ಟಳು. ಕಾರ್ತಿಕ ಮಾಸದಲ್ಲಿ ಮಾಡಿಸಿಕೊಟ್ಟ ಸರವನ್ನು ಬಿಚ್ಚಿ ಪಕ್ಕಕ್ಕಿಟ್ಟಳು. ಕೊನೆಯದೆಂಬತೆ ನನ್ನ ಕೈಗೊಂದು ಲಕೋಟೆಯನ್ನಿಟ್ಟು ಚಹಾದ ಬಿಲ್ ಹಿಡಿದು ಹೊರಟುಹೋದಳು. ಅವಳು ನನ್ನ ಕಣ್ಣಿಂದ ಮರೆಯಾಗುವವರೆಗೂ ನೋಡಿದೆ.ಒಮ್ಮೆಯೂ ತಿರುಗಿ ನೋಡದೇ ಅದ್ಯಾವುದೋ ಬಸ್ಸನ್ನೇರಿ ಹೋದಳು. ಅವಳು ಹಿಂದಿರುಗಿಸಿದ್ದ ಪ್ರತಿಯೊಂದು ಪತ್ರವನ್ನೂ ನನ್ನ ಹೆಗಲ ಚೀಲದಲ್ಲಿ ತುಂಬಿಕೊಂಡಿದ್ದೆ. ನಂತರ ಕೊನೆಯದಾಗಿ ಕೊಟ್ಟುಹೋದ ಪತ್ರದ ಮಡಿಕೆಗಳನ್ನು ಬಿಡಿಸಿ ನೋಡಿದಾಗ; ನಿಜಕ್ಕೂ ನಾ ತಬ್ಬಿಬ್ಬಾಗಿದ್ದೆ.
ನನ್ನೊಲಿವಿನ ಹುಡುಗನೇ……!
ನಾ ನಿನಗೇ ಬರೆಯುವ ಪತ್ರ ಕೊನೆಯದೇನೋ? ನಾನು ನೀನೂ ಒಮ್ಮೆಯೂ ಮಾತಾನಾಡದೆ ಆರು ವರ್ಷಗಳು ನಿರಂತವಾಗಿ ಪ್ರೀತಿಸಿದ್ದೆವು ಎಂದರೆ ಪ್ರಾಯಶಃ ಈ ಸಮಾಜ ನಂಬುವುದಿಲ್ಲ. ಯಾರ ನಂಬುಗೆಯೂ ನಮಗೆ ಅವಶ್ಯಕವಾಗಿರಲಿಲ್ಲ.ಪತ್ರದಲ್ಲಿಯೇ ಭಾವನೆಯನ್ನು ಹಂಚಿಕೊಂಡು,ಕಣ್ಣಲ್ಲೇ ಸೌಂದರ್ಯ ಸವಿಯುತ್ತ, ತುಟಿಯಂಚಿನ ಮೂಲಕ ಮುಗುಳ್ನಗೆಯ ಸಂಭಾಷಣೆ ನಡೆಸಿದ್ದೆವೆಂದರೆ;
ಮೇಲಿನ ದೇವರೆಂಬ ದೇವರೂ ನಂಬುತ್ತಾನೋ ಇಲ್ಲವೋ? ಅದರೆ ನಮ್ಮಿಬ್ಬರ ಹೃದಯಗಳು ಒಂದನ್ನೊಂದು ಅರ್ಥೈಸಿಕೊಂಡು ಪ್ರೀತಿಸುತ್ತಿದ್ದವು ಎಂದರಿತದ್ದು ಮಾತ್ರ ಸತ್ಯ ಅಲ್ವಾ..? ನೀನು ನನ್ನ ಪ್ರೀತಿಸುವುದಕ್ಕಿಂತ ಮುಂಚೆ ಅಂದರೆ ಸ್ನೇಹ ಪೂರ್ವಕವಾಗಿ ಬರೆಯುತಿದ್ದ ಪತ್ರಗಳಲ್ಲಿ ನನ್ನ ಬಗ್ಗೆ ನನ್ನ ಮನೆಯ ಸದಸ್ಯರ ಬಗ್ಗೆ, ಮುಂದಿನ ಗುರಿ ಉದ್ದೇಶಗಳ ಬಗ್ಗೆ ಸವಿಸ್ತಾರವಗಿ ತಿಳಿದುಕೊಳ್ಳಲು ಹವಣಿಸುತ್ತಿದ್ದೆಯಾದರೂ, ನಾನು ಏನೆಂದರೆ ಏನೂ ಹೇಳಿಕೊಳ್ಳದೆ ನಾ ನಿನ್ನ ಪ್ರೀತಿಸುತ್ತಿದ್ದೀನಿ ಎಂದಷ್ಟೇ ಹೇಳಿದ ಮೇಲೆ ನಿನ್ನ ಪತ್ರದ ಶೈಲಿಯೇ ಬದಲಿಯಾಯಿತು. ಬರೀ ಪ್ರೀತಿಯ ಬಗ್ಗೆ, ಮುಂದಿನ ಜೀವನದ ಬಗ್ಗೆ ಕನಸುಗಳನ್ನ ಹೆಣೆಯುತ್ತಾ ಭ್ರಮಾಲೋಕದಲ್ಲಿಯೇ ವಿಹರಿಸಿಬಿಟ್ಟೆವು.
ನಿನಗಿನ್ನೊಂದು ವಿಷಯ ಗೊತ್ತಿರಲಿಕ್ಕಿಲ್ಲ ಮತ್ತು ಈಗಲೂ ನಿನ್ನಗೆ ಗೊತ್ತಿಲ್ಲ. ಅಲ್ಲಿ ನಾನಿದ್ದ ಮನೆ ನನ್ನ ತಂದೆ ತಾಯಿಯರದಲ್ಲ. ಅದು ನನ್ನ ತಾಯಿಯ ತಂಗಿಯ ಮನೆ. ಅಂದರೆ ಚಿಕ್ಕಮ್ಮಳ ಮನೆ. ನಾನು ಚಿಕ್ಕವಳಿದ್ದಾಗಲೇ ತಂದೆ- ತಾಯಿಯರನ್ನು ಕಳೆದುಕೊಂಡ ನತದೃಷ್ಟೆ. ಯಾವುದೋ ವಾಹನ ಅಪಘಾತದಲ್ಲಿ ಇಬ್ಬರೂ ಸಾವ್ನ್ನಪ್ಪಿದ್ದರಂತೆ. ಯಾರೂ ಇಲ್ಲದೇ ಅನಾಥೆಯಾಗಿದ್ದ ನನಗೆ ಚಿಕ್ಕಮ್ಮಳೇ ಆಶ್ರಯಕೊಟ್ಟಿದ್ದಳು. ಅವರ ಸ್ವಂತ ಮಗಳಿಗಿಂತ ಚನ್ನಾಗಿನೋಡಿಕೊಂಡು ವಿದ್ಯಾಭ್ಯಾಸ ಕೊಡಿಸಿದರು. ಬದುಕು ಸರಳರೇಖೆಯಂತೆಯೇ ನಡೆದಿತ್ತು. ಅದ್ಯಾವ ಘಳಿಗೆಯಲ್ಲಿ ನೀ ಬಂದು ನಮ್ಮ ಮನೆಯ ಪಕ್ಕದಲ್ಲಿಯೇ ಮನೆ ಮಾಡಿದೆಯೋ? ಅಂದಿನಿಂದ ನನ್ನ ಮನಸ್ಸು ಹಿಡಿತದಲ್ಲಿರಲಿಲ್ಲ. ನಿನ್ನ ಕಣ್ಣಿನ ಮೊನಚಾದ ನೋಟಕ್ಕೆ ಸೋತು ಬಿಟ್ಟೆ.ಸೋತ ದಿನದಿಂದಲೇ ಗೋಡೆಯ ಮಧ್ಯದ ಕಿಟಕಿಯಿಂದ ಪತ್ರ ವಿನಿಮಯವಾದದ್ದು ಮತ್ತು ಇಲ್ಲದ್ದನ್ನ ಕಲ್ಪಿಸಿಕೊಂಡದ್ದು.
ನಿನ್ನದೊಂದು ಪತ್ರ ಚಿಕ್ಕಮ್ಮಳ ಕೈಗೆ ಅದು ಹೇಗೆ ಸಿಕ್ಕಿತೋ..? ನಾ ಕಾಣೆ. ಅವತ್ತಿನ ಸ್ಥಿತಿ ಹೇಳತೀರದು.”ತಾಯಿ ಇಲ್ಲದ ಮಗಳು ಅಂತ ಸಲುಗೆಯಿಂದ ಬಿಟ್ಟಿದ್ದಕ್ಕೆ ಈ ರೀತಿ ಮಾಡ್ತಾಇದ್ದೀಯ? ಯಾವನೋ ಗೊತ್ತು ಗುರಿ ಇಲ್ಲದ ಆ ಕರಿಯನನ್ನು ಛಿ,, ನಿನ್ನ ಚಿಕ್ಕಪ್ಪನಿಗೆ ಹೇಳಿದ್ರೆ ನಿನ್ನ ಮೂಳೆ ಮುರಿದು … ನನ್ನನ್ನೂ ಕೊಚ್ಚಿ ಹಾಕ್ತಾರೆ.
ನನ್ನ ಅಕ್ಕ ಅಂಥವಳಲ್ಲ, ಅಂದ್ರೆ ನಿನ್ನಮ್ಮ. ದಯಮಾಡಿ ನನ್ನ ಅಕ್ಕಳ ಹೆಸರಿಗೆ ಚ್ಯುತಿ ತರಬೇಡ. ಇದೇ ಮಾಸದಲ್ಲಿ ನಿನಗೆ ಗಂಡು ಹುಡುಕಿ ಮದುವೆ ಮಾಡ್ತೀವಿ. ನಮಗೆ ಸ್ವಲ್ಪನಾದ್ರೂ ಬೆಲೆ ಕೊಡೋದಾದ್ರೆ,ನೀನಿಂದೇ ಬಳ್ಳಾರಿಯ ನಮ್ಮ ಸಂಬಂಧಿಕರ ಮನೆಗೆ ಹೋಗಿರು.
ನೀನು ಇವತ್ತೇ ಬರ್‍ತಾ ಇದ್ದೀ ಅಂತ ಅವರಿಗೆ ಪೋನ್ ಮಾಡಿ ಹೇಳ್ತೀನಿ”. ಅಳುವುದಕ್ಕೂ ಆಸ್ಪದ ಕೊಡದೇ ಪೋನ್ ಮಾಡಿಟ್ಟ ತಕ್ಷಣ ನನ್ನ ಬಟ್ಟೆಗಳನ್ನೆಲ್ಲಾ ಚಿಕ್ಕಮ್ಮಳೇ ಒಂದು ಚೀಲಕ್ಕೆ ತುಂಬಿ, ನೂರರ ಮೂರು ನೋಟು ಕೊಟ್ಟು,, ಬಸ್ ನಿಲ್ದಾಣಕ್ಕೆ ಅವಳೇ ಬಂದು ಬಸ್ಸನ್ಹತ್ತಿಸಿಬಿಟ್ಟಳು.
ಅಂಥ ಸಮಯದಲ್ಲಿ ನಿನಗೊಂದು ಪತ್ರ ಗೀಚಿ ಕಿಟಕಿಯೊಳಗೆ ಹಾಕಲು ಅವಕಾಶ ಸಿಗಲಿಲ್ಲ. ಇಲ್ಲಿಗೆ ಬಂದನಂತರ; ನಿನಗೆ ಬಳ್ಳಾರಿಗೆ ಬಂದು ಹೋಗಲು ಚಿಕ್ಕ ಪತ್ರ ಬರೆದೆ ಮತ್ತು ನೀನು ಬಂದೇ ಬರುತ್ತೀ ಎಂಬ ಭರವಸೆಯಲ್ಲಿಯೇ ನಿನ್ನೊಂದಿಗೆ ಮಾತಿಗಿಳಿಯಲು ಭಯವಾಗುತ್ತದೆಂದೇ ನೀನೀಗ ಓದುತ್ತಿರುವ ಪತ್ರ ಬರೆದಿಟ್ಟುಕೊಂಡಿದ್ದೆ ಹಾಗೂ ನಿನಗೆ ಬರಲು ತಿಳಿಸಿದ ಪತ್ರದಲ್ಲಿ; ಇಂದು ನಾವಿಬ್ಬರೂ ಕೊನೆಯದಾಗಿ ಅಗಲುವ ದಿನ, ಎಂದು ಬರೆದಿದ್ದೆ.ಪ್ರಾಯಶಃ ಮನಸ್ಸಿಗೆ ತುಂಬಾ ವೇದನೆಯಾಗಿರಬೇಕು…ಅದಕ್ಕಾಗಿ ನಿನ್ನಲ್ಲಿ ಕ್ಷಮೆಯಾಚಿಸುವೆ.ನಮ್ಮಿಬ್ಬರ ಮಧ್ಯೆ ಪರಿಸ್ಥಿತಿ ಈ ರೀತಿಯಲ್ಲಿ ಹಿಂಸಿಸುತ್ತದೆಂದು ನಾನು ನಿಜಕ್ಕೂ ಊಹಿಸಿರಲಿಲ್ಲ. ನಿನ್ನ ಜೀವನವಾದರೂ ಸುಖಕರವಾಗಿರಲಿ.
ಇಂತಿ
ನಿನ್ನಿಂದ ದೂರಾದಗೆಳತಿ….
ಹೀಗೆ ಬರೆದು ದೂರಾದ ಗೆಳತಿಯನ್ನು ಶಪಿಸದೆ, ಅವಳ ನೆನಪಿನಲ್ಲಿಯೇ ದಿನಗಳನ್ನು ಕಳೆದೆ. ಅವಳಿಗೆ ಮದುವೆಯಾಯಿತೆಂದು ಕೆಲವು ದಿನಗಳ ಬಳಿಕ ಅವಳ ಚಿಕ್ಕಮ್ಮನ ಮಗಳೇ ರಸ್ತೆಯ ಬದಿಯಲ್ಲೊಮ್ಮೆ ಹೇಳಿದ್ದಳು. ಇದಾಗಿ ಐದು ವರ್ಷಗಳ ನಂತರ ಅದೇ ಹುಡುಗಿಯ ಹಸ್ತಾಕ್ಷರದ ಪತ್ರವೊಂದು ಪುನಃ ಬಂದಿತ್ತು.
“ಪ್ರೀತಿಯ ಹುಡುಗಾ…..!
ಹೇಗಿದ್ದೀಯಾ? ನಾನು ಕಣೋ! ಅದೇ ಮಾತನಾಡದ ಮೌನಗೌರಿ. ನಿನ್ನನ್ನು ತುಂಬ ನೋಡಬೇಕೆನಿಸಿದೆ.ಈ ನಿಮಿತ್ತ ನೀನು ಇದೇ ಭಾನುವಾರ ಪ್ರೀತಿಗೆ ವಿದಾಯ ಹೇಳಿದ ಹೋಟಲ್ಲಿನಲ್ಲಿ; ಮಧ್ಯಾಹ್ನ ಒಂದು ಗಂಟೆಗೆ ನನ್ನನ್ನು ಭೇಟಿಯಾಗಲೇಬೇಕು. ಇದು ನನ್ನ ಕೊನೆಯ ಆಸೆ. ನೀನು ಬಂದೇ ಬರುತ್ತೀ ಎಂದು ಬಲವಾಗಿ ನಂಬಿದ್ದೇನೆ”.
ಇಂತಿ..ನಿನ್ನ….
ಪತ್ರ ಕೈಯಲ್ಲಿ ಹಿಡಿದುಕೊಂಡೇ ಯೋಚಿಸಿದೆ. ಹೋಗಲೋ? ಬೇಡವೋ..? “ಇದು ಕೊನೆಯ ಭೇಟಿ” ಎಂದಿದ್ದಾಳೆ. ಹೋದರಾಯ್ತೆಂದು ನಿರ್ಧರಿಸಿಯೇ ಮೇಲೆದ್ದೆ.
ಪತ್ರ ಶನಿವಾರವೇ ಬಂದಿತ್ತಾದ್ದರಿಂದ; ಮಾರನೆಯ ದಿನ ಮುಂಜಾನೆ ಏಳು ಗಂಟೆಗೇ ರಡಿಯಾಗಿ ಬಳ್ಳಾರಿಯ ಬಸ್ಸು ಹತ್ತಿ ಕುಳಿತೆ. ಮೂರುವರೆ ತಾಸಿನ ಹಾದಿ.ಬಳ್ಳಾರಿ ಬಂದದ್ದೇ ಗೊತ್ತಾಗಲಿಲ್ಲ. ಏಕೆಂದರೆ ನನ್ನ ಮನಸ್ಸೆಲ್ಲಾ ಅವಳ ಕುರಿತೇ ಯೋಚಿಸುತ್ತಿತ್ತಾದ್ದರಿಂದ ಕಲ್ಪನಾಲೋಕದಲ್ಲಿ ಸಾಗಿದ ಹಾದಿ ಅರವಿಗೆ ಬರಲಿಲ್ಲ. ಬಸ್ಸಿಳಿದ ನಂತರ ಅದೇ ಐದು ವರ್ಷದ ಕೆಳಗೆ ಭಿಕ್ಷೆ ಬೇಡುತ್ತ ಕುಳಿತಿದ್ದ ಮುದುಕಿಯನ್ನೇ ವೀಕ್ಷಿಸಿದೆ. ಹಾಗೆಯೇ ಇದ್ದಾಳೆ. ಆದರೆ ಮುಖದ ಮೇಲಿನ ಸುಕ್ಕುರೇಖೆಗಳು ತೀರಾ ಕಪ್ಪಾಗಿವೆ. ಬಟಾಣಿ ಮಾರುತ್ತಿದ್ದ ಹುಡುಗ ಕಾಣಿಸುತ್ತಿಲ್ಲ. ಬಹುಶಃ ಈಗ ಪೇಪರ್ ಮಾರುತ್ತಿರಬಹುದೇನೋ..? ಎಂದು ಕೊಂಡು ಸುಮ್ಮನಾದೆ.
ಆವತ್ತಿದ್ದ ಆತಂಕ ಇವತ್ತಿರಲಿಲ್ಲ. ಏಕೆಂದರೆ ಮನಸ್ಸೆಂದೋ ಮುರಿದು ಕಲ್ಲಂತಾಗಿದ್ದರಿಂದ; ಭಾವನೆಗಳೆಲ್ಲಾ ನಾಶವಾಗಿ ನಿರ್ಭಾವುಕನಾಗಿದ್ದೆ. ಅದೇಕೋ ಕಾಣೆ ಅವಳ ಅದ್ಯಾವ ಮಾಯೆಯಲ್ಲಿ ಪುನಃ ಬಳ್ಳಾರಿಗೆ ಬರುವಂತೆ ಮಾದಿತೋ? ಗೊತ್ತಿಲ್ಲ. ಮನದಲ್ಲಿ ನೂರಾರು ಆಲೋಚನೆಗಳು ಬಂದು ಹೋದರೂ ಅವಳೇಕೆ? ಇಲ್ಲಿಗೆ ಬರಲು ಹೇಳಿದ್ದಾಳೆಂದು ಉತ್ತರ ಸಿಗಲಿಲ್ಲ. ಇನ್ನೇನು ಗಂಟೆ ಒಂದಾಯ್ತು, ಅವಳೇ ಬರ್‍ತಾಳಲ್ಲ! ಎಂದು ನಿರ್ಧರಿಸಿ ಅದೇ ಹೋಟಲ್ ಕಡೆ ಹೆಜ್ಜೆ ಹಾಕಿದೆ.
ನಾ ಅಂದು ಕೊಂಡಂತೆ ಅದೇ ಸ್ಥಳದಲ್ಲಿ ಮಗುವೊಂದಕ್ಕೆ ಯಾವುದೋ ಹಣ್ಣನ್ನು ತಿನ್ನಿಸುತ್ತ ಕುಳಿತಿದ್ದಳು.
ಬಹಳ ದಿನಗಳ ನಂತರ ನನ್ನನ್ನು ಕಂಡದ್ದಕ್ಕೆ ವಿಚಲಿತಗೊಳ್ಳಲಿಲ್ಲ. ಬದಲಾಗಿ ಶಾಂತ ವರ್ತನೆಯಲ್ಲಿಯೇ.. ಮುಂದಿದ್ದ ಖಾಲಿ ಕುರ್ಚಿಗೆ ಕುಳಿತುಕೊಳ್ಳುವಂತೆ ಕೈಸನ್ನೆ ಮಾಡಿದಳು. ಅದೇ ಸಕ್ಕರೆ ರಹಿತ ಚಹಾ ಆರ್ಡರ್ ಮಾಡಿಯೂ ನನ್ನನ್ನು ಕತ್ತೆತ್ತಿ ನೋಡಲಿಲ್ಲ. ಚಹಾ ಕುಡಿವಾಗ ಮಾತ್ರಾ ಒಂದೇ ಒಂದು ಬಾರಿ ಅಂತಃಕರಣ ತುಂಬಿದ ನೋಟ ಬೀರಿದಳು. ಕಪ್ಪಿನೊಳಗಿನ ಚಹಾ ಮುಗಿಯುತ್ತಾ ಬಂದರೂ, ಒಂದೇ ಒಂದು ಮಾತೂ ಆಡದ ಇವಳನ್ನ ಏನೆಂದು ಅರ್ಥೈಸಿಕೊಳ್ಳಲಿ? ಎಂದು ತಲೆ ಕೆರದುಕೊಳ್ಳುವಷ್ಟರಲ್ಲಿ; ನನ್ನ ಮುಂದೊಂದು ಲಕೋಟೆಯನ್ನಿಟ್ಟು ಮಗುವನ್ನೆತ್ತಿಕೊಂಡು ಹೊರಟೇ ಹೋದಳು. ಹಿಂದಿರುಗಿ ನನ್ನ ಊರಿಗೆ ಬರುವವರೆಗೂ, ಆ ಲಕೋಟೆಯೊಳಗೆ ಏನಿದೆ? ಎಂದು ಕುತೂಹಲಕ್ಕೂ ತೆರೆದು ನೋಡಲಿಲ್ಲ. ಹುಡಿಗಿಯರ ಮನಸ್ಸೇಕೆ ಇಷ್ಟೊಂದು ವಿಚಿತ್ರ? ಇವರನ್ನ ಸಂಪೂರ್ಣವಾಗಿ ಅರ್ಥಮಾಡಿಕೊಂಡ ಒಬ್ಬ ತಗ್ನನಾದರೂ ನಾನು ಸಾಯುವುದರೊಳಗಾಗಿ ನನಗೆ ಸಿಗಬಲ್ಲನೇ? ಎಂದು ಯೋಚಿತ್ತಲೇ ಕೋಣೆಯ ಬಾಗಿಲು ಹಾಕಿಕೊಂಡು ಅವಳ ಲಕೋಟೆಯೊಳಗಿನ ಪತ್ರ ಬಿಡಿಸಿ ಓದತೊಡಗಿದೆ.
ಹೇ.. ಹುಡುಗಾ..,
ಹಿಂದಿನ ಬಾರಿ ಬರೆದ ಪತ್ರವೇ ಕೊನೆ ಎಂದು ಬರೆದಿದ್ದೆ. ಆದರೆ ಕೊನೆಯದೆಂದು ಬರೆದಾದ ನಂತರವೂ ನಿನಗೆ ಎರಡು ಪತ್ರ ಬರೆದೆ. ಒಂದು ಬಳ್ಳಾರಿಗೆ ಬರಲು ಬರೆದೆ. ನಂತರ ನೀನೀಗ ಓದುತ್ತಿರುವ ಪತ್ರ ಬರೆದೆ. ಈ ಪತ್ರವನ್ನು ನಿನಗೆ ಬರೆಯಲೇ ಬೇಕಿತ್ತು. ಅಂಚೆಯ ಮೂಲಕ ರವಾನಿಸೋಣವೆಂದುಕೊಂಡೆ. ಆದರೆ ಇನ್ನೊಮ್ಮೆ ಮುಖಾ-ಮುಖಿ ನೋಡಬೇಕೆನಿಸಿದ ಪರಿಣಾಮ ನಿನ್ನನ್ನು ಭೇಟಿಯಾಗಲು ತಿಳಿಸಿದೆ. ಅಂದಹಾಗೆ ಹಿಂದಿನ ತಿಂಗಳು ನೀ ನಂಬದ ದೇವರು ನನ್ನ ತಾಳಿಯನ್ನ ಕಿತ್ತುಕೊಂಡ. ನೀನು ಬಂದಾಗ; ನಾನು ಕತ್ತು ಬಗ್ಗಿಸಿ ಕುಳಿತದ್ದು ನಿನ್ನ ಕಣ್ಣಿನ ನೋಟ ಎದುರಿಸಲಾಗದೇ ಅಲ್ಲ, ಕತ್ತಿನಲ್ಲಿರದ ಮಾಂಗಲ್ಯ ಎಲ್ಲಿ? ಎಂದು ಕೇಳಬಾರದೆಂದು. ನನ್ನ ಗಂಡನೆಂಬುವವನು ಹೊಟ್ಟೆಕಿಚ್ಚಿಗಾಗಿ ನನಗೆ ಗಂಡು ಮಗು ಕೊಟ್ಟು ಹೋಗಿದ್ದರೂ, ಆ ಮಗುವಿಗಾಗಿ ನಾನು ಬದುಕಿದ್ದೇನೆಂದು ತಿಳಿಯಬೇಡ. ನಿಜಕ್ಕೂ ನಿನ್ನನ್ನು ಇನ್ನೊಮ್ಮೆ ನನ್ನ ಕಣ್ಣಲ್ಲಿ ತುಂಬಿಕೊಳ್ಳಲು ಬದುಕಿದ್ದೆ.
ನಾನು ಸಾಯಲು ನಿರ್ಧಾರ ತೆಗೆದುಕೊಂಡಿದ್ದೇನೆ. ಸತ್ತು ಸಾಧಿಸುವುದಾದರೂ ಏನು? ಎಂಬ ಎಲ್ಲರ ಪ್ರೆಶ್ನೆಯನ್ನು ಧಿಕ್ಕರಿಸಿದ್ದೇನೆ. ಏಕೆಂದರೆ ನನ್ನ ಸ್ಥಾನದಲ್ಲಿ ನೀನಿದ್ದರೂ, ಇದೇ ನಿರ್ಧಾರಕ್ಕೆ ಬರುತ್ತಿದ್ದೆ.
ಕಾರಣ ಸತ್ತು ಹೋಗಿರುವ ನನ್ನ ಗಂಡ ಆಕಸ್ಮಿಕವಾಗಿ ಸತ್ತಿಲ್ಲ. ಏಡ್ಸ್ ಎಂಬ ಭಯಂಕರ ರೋಗಕ್ಕೆ ತುತ್ತಾಗಿ ಸತ್ತಿದ್ದಾನೆ. ಮಗುವಿಗೂ ಅವನದೇ ರಕ್ತ. ಅಂದರೆ ಮಗುವಿನಲ್ಲಿಯೂ ಎಚ್.ಐ.ವಿ. ವೈರಸ್ಗಳಿವೆ,ನಾನು ಮತ್ತು ನನ್ನ ಮಗು ಬಹಳ ದಿನ ಬದುಕಲಾರೆವು. ಬದುಕಿದಷ್ಟೂ ಸಮಾಜದಲ್ಲಿ ಅವಮಾನ ಭರಿಸಲಾರೆವು.
ಅದಕ್ಕೆಂದೇ ನನ್ನ ಈ ನಿರ್ಧಾರ. ಅಂದು ಪ್ರೀತಿಗೆ ವಿದಾಯ ಹೇಳಿದೆ. ಇಂದು ಬದುಕಿಗೆ ವಿದಾಯ ಹೇಳುತ್ತಿದ್ದೇನೆ. ಮುಂದಿನ ಜನ್ಮದಲ್ಲಾದರೂ ಒಂದಾಗಲು ದೇವರಲ್ಲಿ ಬೇಡಿಕೊಳ್ಳೋಣವೆಂದರೆ; ನೀನು ದೇವರನ್ನೇ ನಂಬದ ನಾಸ್ತಿಕ! ನೀನಾದರೂ ಇದ್ದಷ್ಟು ದಿನ ಧರೆಯ ಮೇಲೆ ಚನ್ನಾಗಿರು..
ಇಂತಿ..
ನಿನ್ನಿಂದ ಶಾಶ್ವತವಾಗಿ ದೂರಾಗುತ್ತಿರುವ ಗೆಳತಿ…….
ಪತ್ರ ಓದುತ್ತಿದ್ದಂತೆ ಕಣ್ಣಲ್ಲಿನ ನೀರು ಕೆನ್ನೆಯ ಮೇಲೆ ಹೆಪ್ಪುಗಟ್ಟಿದ್ದವು. ಇದು ನನ್ನ ಮತ್ತು ಅವಳ ಕಥೆ…!
ನಾಗರಾಜ್, ತಳವಾರ್
ತುಂಬಾ ನೋವಾಯ್ತು ಓದಿ………
:(…………
chengi eade